ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕರವೇಯಿಂದ ಪ್ರತಿಭಟನೆ

ಶಿಡ್ಲಘಟ್ಟ, ಸೆ.14: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಗುರುವಾರ ಕನ್ನಡ ರಕ್ಷಣಾ ವೇದಿಕೆ ಸಂಘಟನೆಯ ಸದಸ್ಯರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ಬಸ್ ನಿಲ್ದಾಣದಿಂದ ಮೆರವಣಿಗೆಯನ್ನು ನಡೆಸಿ ಕರವೇ ಸದಸ್ಯರು ತಾಲೂಕು ಕಚೇರಿಯ ಮುಂದೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯವಾಗಿದ್ದು, ಇದು ವಿಚಾರ ಹಿಂದಿನ ಮತ್ತು ವಿಚಾರ ಹತ್ತಿಕ್ಕುವ ಪ್ರಯತ್ನವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಪರಸ್ಪರ ರಾಜಕೀಯ ಲಾಭಕ್ಕೆ ಈ ಹತ್ಯೆಯನ್ನು ಉಪಯೋಗಿಸಿಕೊಳ್ಳದೆ, ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವ ಮೂಲಕ ಸಂವಿಧಾನ ಪರವಾಗಿದ್ದೇವೆಂದು ತೋರಿಸಬೇಕೆಂದು ಆಗ್ರಹಿಸಿದರು.
ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯ ಹಿಂದಿರುವ ದುಷ್ಕರ್ಮಿಗಳನ್ನು ರಾಜ್ಯ ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಗ್ರೇಡ್ 2 ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ನಾಗರಾಜ್, ಧನುಶ್ ಗೌಡ, ಶಿವಕುಮಾರ್, ಸುರೇಶ್, ಕೇಶವಮೂರ್ತಿ, ಮಣಿ, ಶ್ರೀಧರ್, ಅಪ್ಪು, ರವಿ, ಮೂರ್ತಿ, ಮುನಿಯಪ್ಪ, ತಂಗರಾಜು ಹಾಜರಿದ್ದರು.





