ಅನುದಾನದಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ, ಅಧಿಕಾರಿಗಳು ಪಾರದರ್ಶಕ ಕೆಲಸ ಮಾಡಬೇಕು: ಜಿ.ಎಂ. ಸಿದ್ದೇಶ್ವರ್

ದಾವಣಗೆರೆ, ಸೆ.14: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ, 14ನೆ ಹಣಕಾಸು ಯೋಜನೆ ಖಾತರಿ ಅನುದಾನದಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ, ಅಧಿಕಾರಿಗಳು ಪಾರದರ್ಶಕ ಕೆಲಸ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಸೂಚಿಸಿದರು.
ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತರಿ ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಅನುದಾನ ದುರ್ಬಳಕೆಯಾಗುತ್ತಿರುವ ಬಗ್ಗೆ ಅನೇಕ ದೂರು ಕೇಳಿ ಬರುತ್ತಿದ್ದು, ಜಗಳೂರು, ಹರಪನಹಳ್ಳಿ ತಾಲೂಕು ವ್ಯಾಪ್ತಿಯ ಅನೇಕ ಗ್ರಾಪಂ ಅಧ್ಯಕ್ಷರು, ಪಿಡಿಒ ಇತರೆ ಸಿಬ್ಬಂದಿ ಭ್ರಷ್ಟಾಚಾರ ಎಸಗಿದ್ದು, ಈ ಬಗ್ಗೆ ಯಾರ್ಯಾರ ಮೇಲೆ ಕ್ರಮ ಕೈಗೊಳ್ಳಲಾಗಿದೆ? ಎಂದು ಅವರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ ಮಾತನಾಡಿ, ಅಣಬೂರು, ಬಿಳಿಚೋಡು, ಬಿಸ್ತುವಳ್ಳಿ, ಹನುಮಂತಾಪುರ, ದಿದ್ದಿಗೆ, ದೊಣೆಹಳ್ಳಿ, ತೋರಣಘಟ್ಟ ಗ್ರಾಪಂ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಅಮಾನತುಪಡಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಸಮಿತಿ ಸದಸ್ಯ ಆರ್.ಲಕ್ಷ್ಮಣ ಮಾತನಾಡಿ, ಬಸವನಕೋಟೆ ಗ್ರಾಪಂನಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿಗೆಂದು 40 ಲಕ್ಷ ದುರ್ಬಳಕೆಯಾಗಿದೆ. ದಾಖಲೆ ಕೇಳಿದರೆ ಸ್ಪಂದಿಸುತ್ತಿಲ್ಲ. ಮಾಹಿತಿ ನೀಡುತ್ತಿಲ್ಲ. ಹರಪನಹಳ್ಳಿ ತಾ. ಅರಸೀಕೆರೆ ಗ್ರಾಪಂನಲ್ಲೂ ಇದೇ ಸ್ಥಿತಿ ಇದೆ ಎಂದಾಗ ಸದಸ್ಯರಾದ ನಾಗರತ್ನಬಾಯಿ, ಜಿ. ಮಂಜಾನಾಯ್ಕ ಸಹ ಧ್ವನಿಗೂಡಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಖಾತರಿ ಯೋಜನೆ ಜಾರಿಗೊಂಡಾಗಿನಿಂದ ಈವರೆಗಿನ ಮಾಹಿತಿ ಆನ್‍ಲೈನ್‍ನಲ್ಲೇ ಪಡೆಯಬಹುದು. ಅಧಿಕಾರಿಗಳು ಸಮಿತಿ ಸದಸ್ಯರಷ್ಟೇ ಅಲ್ಲ, ಜನ ಸಾಮಾನ್ಯರು ಬಂದರೂ ಮಾಹಿತಿ ಕೇಳಿದಾಗ ನೀಡಿ ಎಂದು ಸೂಚಿಸಿದರು.
ಡಿಎಸ್ ಷಡಕ್ಷರಪ್ಪ ಮಾತನಾಡಿ, ಸಮಿತಿ ಸದಸ್ಯರು ಭೇಟಿ ನೀಡುವ ಮುನ್ನ ಜಿಪಂ ಗಮನಕ್ಕೆ ತಂದಲ್ಲಿ ಆಯಾ ಗ್ರಾಪಂಗೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದರು.
ಬಳಿಕ ಸಂಸದ ಸಿದ್ದೇಶ್ವರ ಮಾತನಾಡಿ, ಹರಪನಹಳ್ಳಿ ತಾ. ಹಾಲಮರಸಿಕೆರೆ ಗ್ರಾಪಂನಲ್ಲಿ ಉದ್ಯೋಗ ಖಾತರಿ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದರೆ ಅಲ್ಲಿನ ಗ್ರಾಪಂ ಅಧ್ಯಕ್ಷರು ದೌರ್ಜನ್ಯ ಎಸಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದು, ಇಂತಹದ್ದೊಂದು ಒಳ್ಳೆಯ ಯೋಜನೆ ದುರ್ಬಳಕೆ ಸರಿಯಲ್ಲ ಎಂದರು.
ಬೆಳಗುತ್ತಿ ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಮನವೊಲಿಸಿ, ಕೆಲಸಕ್ಕೆ ಹಚ್ಚುತ್ತೇವೆ. ಕೂಲಿ ಹಣವೇ ಬಾರದಿದ್ದರೆ ಕಷ್ಟವಾಗುತ್ತದೆ. ಕೂಲಿ ಹಣ ಕೊಡಲಾಗದೇ ನಾವು ಪೇಚಿಗೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡರು.
ಡಿಸಿ ರಮೇಶ್ ಮಾತನಾಡಿ, ನಿಮ್ಮ ಗ್ರಾಪಂನಿಂದಲೇ ಕೂಲಿ ಹಣ ಪಾವತಿಸಿ, ಹಣ ಬಂದ ನಂತರ ಪಡೆಯಬೇಕು. ಸ್ಥಳದಲ್ಲೇ ಕೂಲಿ ಕಾರ್ಮಿಕರಿಗೆ 250 ರು. ಕೂಲಿ ಪಾವತಿಸಿ, ಪಾರದರ್ಶಕತೆ ಕಾಯ್ದುಕೊಳ್ಳಿ ಎಂದರು.
ಸಭೆಯಲ್ಲಿ ಜಿಪಂ ಸಿಇೊ ಎಸ್. ಅಶ್ವತಿ, ಯೋಜನಾ ನಿರ್ದೇಶಕ ಬಸನಗೌಡ, ಮುಖ್ಯ ಲೆಕ್ಕಾಧಿಕಾರಿ ಟಿ. ಆಂಜನೇಯ, ಜಿಪಂ ಸದಸ್ಯರಾದ ಶೈಲಜಾ ಬಸವರಾಜ, ದೀಪಾ ಜಗದೀಶ, ಸಮಿತಿ ಸದಸ್ಯ ಪರಮಶಿವ, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮತ್ತಿತರರಿದ್ದರು.







