ಕ್ರೀಡೆಯಿಂದ ಅನೇಕ ಉದ್ಯೋಗ ಅವಕಾಶಗಳು ದೊರೆಯುತ್ತಿದೆ: ಅನಿತಾಬಾಯಿ ಮಾಲತೇಶ್

ದಾವಣಗೆರೆ, ಸೆ.14: ಕ್ರಿಕೆಟ್, ಟೆನ್ನಿಸ್, ಬ್ಯಾಟ್ಮಿಂಟನ್ ಆಟಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವುದರಿಂದ ನಮ್ಮ ದೇಶಿಯ ಕ್ರೀಡೆಗಳು ಕಣ್ಮರೆಯಾಗುತ್ತಿದೆ ಎಂದು ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ದಾವಣಗೆರೆ ವಿವಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ದಾವಣಗೆರೆ ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ ಮತ್ತು ತಂಡದ ಆಯ್ಕೆ 2017-18ನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕಬಡ್ಡಿ ಪಂದ್ಯಾವಳಿಗೆ ಹೆಚ್ಚಿನ ಮಹತ್ವ ಬಂದಿರುವುದಲ್ಲದೇ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಆಟವೆಂದರೇ ಕೇವಲ ಕ್ರಿಕೇಟ್ ಮಾತ್ರವಲ್ಲ. ಇತರೆ ಕ್ರೀಡೆಗಳಲ್ಲೂ ಸಾಧನೆ ಮಾಡಬಹುದು ಎಂದು ಅರಿಯಬೇಕು ಎಂದ ಅವರು, ವಿದ್ಯಾರ್ಥಿಗಳು ಕ್ರೀಡೆಯನ್ನು ಅಲಕ್ಷಿಸಬಾರದು. ಕ್ರೀಡೆಯಿಂದ ಅನೇಕ ಉದ್ಯೋಗ ಅವಕಾಶಗಳು ದೊರೆಯುತ್ತಿದೆ. ಆದ್ದರಿಂದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ, ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಆಸಕ್ತಿದಾಯಕವಾಗಿ ಮತ್ತಷ್ಟು ತರಬೇತಿ ಪಡೆದು ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್.ಗುಳೇದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಪಂದ್ಯಾವಳಿಗೆ ಉತ್ತಮ ಉತ್ತೇಜನ ದೊರೆಯುತ್ತಿದ್ದು, ಇದರಂತೆ ಇತರೆ ಜನಪದ ಕ್ರೀಡೆಗಳಿಗೆ ಮಾನ್ಯತೆ ದೊರೆಯಲಿ. ಹಾಗೆಯೇ ಭಾರತದ ಕ್ರೀಡಾಪಟುಗಳು ಹೆಚ್ಚಿನ ಪ್ರಮಾಣದಲ್ಲಿ ಒಲಂಪಿಕ್ಸ್‍ನಲ್ಲಿ ಭಾಗವಹಿಸಲಿ ಎಂದರು.
ರಾಜ್ಯ ವಿವಿ ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ ಮಾತನಾಡಿ, ಈ ಹಿಂದೆ ಕ್ರೀಡೆಗಳಿಗೆ ಅಷ್ಟರ ಮಟ್ಟಿಗೆ ಪ್ರೋತ್ಸಾಹ ದೊರೆಯುತ್ತಿರಲ್ಲಿ. ಇದರಿಂದಾಗಿಯೇ ದೇಶಿಯ ಕ್ರೀಡೆಗಳು ಮರಿಚಿಕೆಯಾಗಿವೆ ಎಂದ ಅವರು, ಕೆಲವು ಕ್ರೀಡೆಗಳು ಮಾತ್ರ ಹೆಚ್ಚಿನ ಮನ್ನಣೆ ದೊರೆತ್ತಿದ್ದು, ಅದೇ ರೀತಿ ಉಳಿದ ಕ್ರೀಡೆಗಳು ಹೆಚ್ಚಿನ ಮಾನ್ಯತೆ ದೊರೆಯಬೇಕೆಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಎಸ್. ರಾಜಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ. ಯೋಗೀಶ್, ಡಾ.ಕೆ.ಎಚ್.ಜಿ. ಶಾಂತಕುಮಾರಿ, ಎಂ.ಕೆ. ದಾನಪ್ಪ, ಎಸ್.ಆರ್. ಭಜಂತ್ರಿ, ಭೀಮಣ್ಣ ಸುಣಗಾರ್, ಶಶಿಕಲಾ, ಪ್ರಕಾಶ್ ಹಲಗೇರಿ, ತಿಪ್ಪಾರೆಡ್ಡಿ, ಡಾ.ಟಿ. ಮಂಜಣ್ಣ ಮತ್ತಿತರರು ಇದ್ದರು.







