ವೀರಶೈವ ಮಹಾಸಭೆ ನಿರ್ಣಯ ಆಕ್ಷೇಪಾರ್ಹ: ಸಿದ್ದರಾಮ ಸ್ವಾಮಿ
ಬೆಳಗಾವಿ, ಸೆ.15: ಅಖಿಲ ಭಾರತ ವೀರಶೈವ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಣ್ಣ ವಿಜಾಪುರ ಹಾಗೂ ಇತರ ಪದಾಧಿಕಾರಿಗಳನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳನ್ನಾಧರಿಸಿ ಕೇಂದ್ರ ಸಮಿತಿಯು ಪದಚ್ಯುತಗೊಳಿಸಿ ಅಡ್‌ಹಾಕ್ ಅಧ್ಯಕ್ಷರನ್ನು ನೇಮಿಸಿರುವುದು ಆಕ್ಷೇಪಾರ್ಹ ಎಂದು ನಾಗನೂರು ರುದ್ರಾಕ್ಷಿವುಠದ ಸಿದ್ದರಾಮ ಸ್ವಾಮಿ ತಿಳಿಸಿದ್ದಾರೆ.
ಚುನಾಯಿತ ಸದಸ್ಯರೊಡನೆ ವಿಚಾರ-ವಿಮರ್ಶೆ ಮಾಡದೆ, ಅವರ ಅಭಿಪ್ರಾಯಗಳನ್ನು ಕೇಳದೆ ಹೀಗೆ ಏಕಾಏಕಿ ಪದಚ್ಯುತಗೊಳಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿದಂತಾಗಿದೆ ಎಂದು ಸಿದ್ದರಾಮ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಎಲ್ಲ ಸೊತ್ತು ಜಿಲ್ಲಾ ಘಟಕದ ಸರ್ವಸದಸ್ಯರ ಹಾಗು ಸ್ಥಳೀಯ ಜನತೆಯದಾಗಿದ್ದು, ಅದರ ಮೇಲೆ ನಯಾಪೈಸೆಯನ್ನು ಕೊಡದ ಕೇಂದ್ರ ಸಮಿತಿ ಈ ರೀತಿ ಹಕ್ಕು ಸಾಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಮಿತಿಯಲ್ಲಿ ಶಾಮನೂರು ಶಿವಶಂಕರಪ್ಪ, ಎನ್.ತಿಪ್ಪಣ್ಣ ಅವರಂತಹ ವಿವೇಚನಾಶೀಲ ಹಿರಿಯರು ಇದ್ದಾರೆ. ಅವರೇ ಹೀಗೆ ಮಾಡಿರುವುದು ‘ತಾಯಿಯ ಮೊಲೆ ಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ’ ಎಂದು ಮೊರೆಯಿಡುವಂತಾಗಿದೆ ಎಂದು ಸಿದ್ದರಾಮಯ್ಯ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ. ಆಗಿರುವುದನ್ನು ಸರಿಪಡಿಸಿಕೊಳ್ಳುವುದಕ್ಕೆ ಮತ್ತು ಮಹಾಸಭೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ ಸ್ಥಳೀಯರ ಭಾವನೆಗಳನ್ನು ಗೌರವಿಸುವುದಕ್ಕೆ ಅವಕಾಶವಿದೆ. ಈಗ ಅಡ್ ಹಾಕ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಸ್ವಾಭಿಮಾನಿ ಮತ್ತು ವಿಚಾರಶೀಲ ನಿವೃತ್ತ ಅಧಿಕಾರಿ ವೈ.ಎಸ್.ಪಾಟೀಲರು ಕೇಂದ್ರ ಸಮಿತಿಯ ಈ ನಿರ್ಣಯವನ್ನು ಮಾನ್ಯ ಮಾಡುವುದಿಲ್ಲ ಎಂದು ಎಲ್ಲರೂ ನಂಬಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಜನತೆಯ ವಿರೋಧದಲ್ಲಿ ಸ್ಥಾನ ಅಲಂಕರಿಸಿದವರು ಪದವಿ ಭೂಷಣರಾಗುವರಷ್ಟೇ ಹೊರತು ಅವರು ಜನರ ಆದರಕ್ಕೆ ಪಾತ್ರರಾಗುವುದಿಲ್ಲ ಎಂಬುದು ಅವರಿಗೆ ತಿಳಿಯದ ವಿಷಯವೇನಲ್ಲ. ತನ್ನ ಕ್ರಿಯಾಶೀಲತೆಯಿಂದ ರಾಜ್ಯದಲ್ಲಿ ಮಾದರಿ ಜಿಲ್ಲಾ ಘಟಕವೆಂಬ ಖ್ಯಾತಿಗೆ ಪಾತ್ರವಾದ ಜಿಲ್ಲಾ ಘಟಕವನ್ನು ನಿಷ್ಕ್ರಿಯಗೊಳಿಸಿ ಕೇಂದ್ರ ಸಮಿತಿಯಂತೆ ಇದನ್ನು ನಿಷ್ಕ್ರಿಯವಾಗಿಸುವ ಕಾರ್ಯ ಮಾಡುತ್ತಿರುವುದು ಬೆಳಗಾವಿ ಜಿಲ್ಲೆಯ ಸಮಾಜ ಬಾಂಧವರಲ್ಲಿ ತಳಮಳವನ್ನುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ವೀರಶೈವ ಪದ ಇರಲೇಬೇಕೆನ್ನುವವರು ತಾವು ಹಿಂದೂಗಳು ಎನ್ನುತ್ತಾರೆ. ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂದು ಸರಕಾರಗಳಿಗೆ ಮನವಿ ಸಲ್ಲಿಸುತ್ತಿರುವ ಕೇಂದ್ರ ಸಮಿತಿ, ವೀರಶೈವ-ಲಿಂಗಾಯತರು ಹಿಂದೂಗಳಲ್ಲ ಎನ್ನುತ್ತದೆ. ಮೊದಲು ತನ್ನ ಗೊಂದಲವನ್ನು ಬಗೆಹರಿಸಿಕೊಂಡು ಸಮಾಜಕ್ಕೆ ಆದರ್ಶದ ದಾರಿಯನ್ನು ತೋರಬೇಕೆಂದು ಮಹಾಸಭೆಯ ಎಲ್ಲ ಸದಸ್ಯರಿಗೆ ಸಿದ್ದರಾಮಸ್ವಾಮಿ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.







