ಗ್ರಾಹಕರ ಕ್ರೆಡಿಟ್ ಕಾರ್ಡ್ ಸಂಖ್ಯೆ ಕಳವು ಪ್ರಕರಣ: ವಿದೇಶಿ ಪ್ರಜೆಗಳಿಬ್ಬರ ಬಂಧನ
.jpg)
ಬೆಂಗಳೂರು, ಸೆ.15: ಎಟಿಎಂ ಕೇಂದ್ರಗಳಲ್ಲಿ ಕ್ಯಾಮರಾ ಮತ್ತು ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಗ್ರಾಹಕರ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಪಾಸ್‌ವರ್ಡ್ ಕಳವು ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರೊಮೇನಿಯಾ ದೇಶದ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್(40), ಹಂಗೇರಿಯಾದ ಮಾರೆ ಜಾನೋಸ್ (44) ಬಂಧಿತ ವಿದೇಶಿ ಪ್ರಜೆಗಳು ಎಂದು ಸಿಐಡಿ ಹೇಳಿದೆ.
ಪ್ರಕರಣದ ವಿವರ: ತಮ್ಮ ಕೆಲವು ಎಟಿಎಂ ಕೇಂದ್ರಗಳಲ್ಲಿ ಅಕ್ರಮವಾಗಿ ಕಾರ್ಡ್ ಸ್ಕಿಮ್ಮಿಂಗ್ ಉಪಕರಣಗಳನ್ನು ಅಳವಡಿಸಿರುವುದು ಕಂಡು ಬಂದಿರುವ ಬಗ್ಗೆ ಸೆ.12ರಂದು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಅಧಿಕಾರಿಗಳು ಸಿಐಡಿಯ ಸೈಬರ್ ಕ್ರೈಂ ಘಟಕಕ್ಕೆ ದೂರು ನೀಡಿದ್ದರು. ಬ್ಯಾಂಕಿನ ತಾಂತ್ರಿಕ ತಂಡ ವಶಪಡಿಸಿಕೊಂಡಿದ್ದ ಎಂಜಿ ರಸ್ತೆಯಲ್ಲಿರುವ ಶಾಖೆಯಲ್ಲಿದ್ದ ಸ್ಕಿಮ್ಮಿಂಗ್ ಉಪಕರಣಗಳನ್ನು ಪೊಲೀಸರಿಗೆ ನೀಡಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಸಿಐಡಿ ಪೊಲೀಸರು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೋಟಕ್ ಮಹೀಂದ್ರ ಬ್ಯಾಂಕ್‌ನ ಎಟಿಎಂ ಒಂದರಲ್ಲಿ ಆರೋಪಿಗಳು ಸ್ಕಿಮ್ಮಿಂಗ್ ಉಪಕರಣ ಅಳವಡಿಸಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಅಂದು ರಾತ್ರಿ 10ರ ಸುಮಾರಿಗೆ ಆರೋಪಿಯು ಸಹಚರನೊಂದಿಗೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿದ್ದ ವಿಮಾನ ನಿಲ್ದಾಣದಲ್ಲಿನ ಎಟಿಎಂ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಪೊಲೀಸರನ್ನು ಕಂಡ ಆರೋಪಿಯು ಎಟಿಎಂನಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್ ಉಪಕರಣ ತೆಗೆದುಕೊಳ್ಳದೆ ಟ್ಯಾಕ್ಸಿಯಲ್ಲಿ ಪರಾರಿಯಾಗಲು ಯತ್ನಿಸಿದಾಗ ಸೈಬರ್ ಕ್ರೈಂ ಪೊಲೀಸರು ಆತನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಇಂಗ್ಲೆಡ್‌ನಲ್ಲಿ ವಾಸವಾಗಿರುವ ತಮ್ಮ ಸಹಚರರ ನಿರ್ದೇಶನದಂತೆ ಭಾರತದಲ್ಲಿ ಕ್ರೆಡಿಟ್ ಮತ್ತು ಡೆಬಿಟ್‌ಕಾರ್ಡ್‌ಗಳ ಮಾಹಿತಿಯನ್ನು ಆರೋಪಿಗಳಿಬ್ಬರು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ವಿಮಾನ ನಿಲ್ದಾಣದ ಕೋಟಕ್ ಮಹೀಂದ್ರ ಬ್ಯಾಂಕ್‌ನ ಎಟಿಎಂ, ಗರುಡಾ ಮಾಲ್‌ನಲ್ಲಿರುವ ಸಿಟಿ ಬ್ಯಾಂಕ್ ಎಟಿಎಂನಲ್ಲಿ ಎರಡು ಬಾರಿ, ಎಂಜಿ ರಸ್ತೆಯ ಕೆನರಾಬ್ಯಾಂಕ್‌ನ ಎಟಿಎಂನಲ್ಲಿ ಎರಡು ಬಾರಿ, ಟ್ರಿನಿಟಿಮೆಟ್ರೋ ಬಳಿಯ ಕೋಟಕ್ ಮಹೀಂದ್ರ ಬ್ಯಾಂಕ್‌ನ ಎಟಿಎಂ ಹಾಗೂ ಬ್ರಿಗೆಡ್ ರಸ್ತೆ ಜಂಕ್ಷನ್‌ನಲ್ಲಿರುವ ಕೋಟಕ್ ಬ್ಯಾಂಕ್‌ನ ಎಟಿಎಂನಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್ ಉಪಕರಣಗಳನ್ನು ವಾಪಸ್ ತೆಗೆದುಕೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಸಿಐಟಿ ಅಧಿಕಾರಿಗಳು ತಿಳಿಸಿದ್ದಾರೆ.







