ಅಭಿವೃದ್ಧಿ ಯೋಜನೆಗಳಿಗೆ ಜನಸಾಮಾನ್ಯರಿಂದ ಬಂಡವಾಳ ಸಂಗ್ರಹ: ಸಚಿವ ನಿತಿನ್ ಗಡ್ಕರಿ ಚಿಂತನೆ

ಮುಂಬೈ, ಸೆ.15: ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ವಿದೇಶದಿಂದ ಬಂಡವಾಳ ಪಡೆಯುವ ಬದಲು ವೃತ್ತಿಪರರೂ ಸೇರಿದಂತೆ ಜನಸಾಮಾನ್ಯರಿಂದ ಬಂಡವಾಳ ಸಂಗ್ರಹಿಸುವುದಕ್ಕೆ ಆದ್ಯತೆ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಲ್ಲದೆ ಹೀಗೆ ಸಂಗ್ರಹಿಸಲಾಗುವ ಬಂಡವಾಳವನ್ನು ಉತ್ತಮ ಬಡ್ಡಿಯೊಂದಿಗೆ ಹಿಂದಿರುಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಸಾರಸ್ವತ್ ಕೋಆಪರೇಟಿವ್ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಗಡ್ಕರಿ, ನಿವೃತ್ತ ಉದ್ಯೋಗಿಗಳು, ಬಡವರು, ಶಿಕ್ಷಕರು ಹಾಗೂ ಪೊಲೀಸ್ ಕಾನ್‌ಸ್ಟೇಬಲ್‌ಗಳಿಂದ ಬಂಡವಾಳ ಸಂಗ್ರಹಿಸಲು ತಮ್ಮ ಇಲಾಖೆ ಆದ್ಯತೆ ನೀಡುತ್ತಿದ್ದು ಈ ಮೊತ್ತವನ್ನು ಬಡ್ಡಿ ಸಹಿತ ಮರಳಿಸುವುದಾಗಿ ಹೇಳಿದರು. ಬ್ಯಾಂಕ್‌ಗಿಂದ ಹೆಚ್ಚಿನ ಬಡ್ಡಿಯನ್ನು ನಾವು ನೀಡುತ್ತೇವೆ ಎಂದವರು ಭರವಸೆ ನೀಡಿದರು.
ಕೇಂದ್ರ ಸರಕಾರ ಇಪಿಸಿ (ಯೋಜನೆ, ಸಂಗ್ರಹಣೆ, ನಿರ್ಮಾಣ)ವಿಧಾನದಲ್ಲಿ ಯೋಜನೆಗಳನ್ನು ನಿರ್ಮಿಸಲು ಉತ್ಸುಕವಾಗಿದೆ ಎಂದೂ ಸಚಿವರು ತಿಳಿಸಿದರು. 1990ರ ದಶಕಾಂತ್ಯದಿಂದ ಯೋಜನೆಗಳು ಪಿಪಿಪಿ (ಸರಕಾರ- ಖಾಸಗಿ ಭಾಗೀದಾರಿಕೆ) ವಿಧಾನದಲ್ಲಿ ನಿರ್ಮಾಣಗೊಳ್ಳುತ್ತಿವೆ. ಇದರನ್ವಯ ಖಾಸಗಿ ಸಂಸ್ಥೆಗಳು ಸರಕಾರದ ಯೋಜನೆಗಳನ್ನು ನಿರ್ಮಿಸುತ್ತವೆ.
1995ರಿಂದ 99ರವರೆಗೆ ತಾನು ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಮೈತ್ರಿಕೂಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭ ನಿರ್ಮಾಣಗೊಂಡಿರುವ 55 ಫ್ಲೈಓವರ್‌ಗಳು, ಬಾಂದ್ರ-ವೊರ್ಲಿ ಸೇತುವೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗಳನ್ನು ಉಲ್ಲೇಖಿಸಿದ ಗಡ್ಕರಿ, ಜನಸಾಮಾನ್ಯರ ಹಣವನ್ನು ಬೃಹತ್ ಯೋಜನೆಗಳಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇವು ಉದಾಹರಣೆಯಾಗಿದೆ ಎಂದರು.
44,000 ಕೋಟಿ ರೂ.ವೆಚ್ಚದ ಮುಂಬೈ- ವಡೋದರ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣ ಯೋಜನೆಯನ್ನು ಇಪಿಸಿ ವಿಧಾನದಲ್ಲಿ ಕೈಗೆತ್ತಿಕೊಳ್ಳಲು ಸಚಿವಾಲಯ ತೀರ್ಮಾನಿಸಿದೆ ಎಂದು ತಿಳಿಸಿದ ಗಡ್ಕರಿ, ಸರಕಾರಿ ಬೆಂಬಲಿತ ಅಭಿವೃದ್ಧಿ ಯೋಜನೆಗಳಲ್ಲಿ ಹಣ ವಿನಿಯೋಗಿಸಲು ಜನರಿಂದ ಭಾರೀ ಒಲವು ವ್ಯಕ್ತವಾಗುತ್ತಿದೆ ಎಂದರು.
ಕೊಚ್ಚಿನ್ ಶಿಪ್‌ಯಾರ್ಡ್‌ನ ಯೋಜನೆಯೊಂದನ್ನು ಉದಾಹರಿಸಿದ ಅವರು, ಇದಕ್ಕೆ ಪ್ರಾರಂಭಿಕ ಸಾರ್ವಜನಿಕ ಪ್ರಸ್ತಾವಕ್ಕಿಂತ 76 ಪಟ್ಟು ಹೆಚ್ಚು ಅಂದರೆ ಸುಮಾರು 1.25 ಲಕ್ಷ ಕೋಟಿ ರೂಪಾಯಿಯಷ್ಟು ಪ್ರಸ್ತಾವನೆ ಒದಗಿ ಬಂದಿದೆ ಎಂದರು. ಸಹಕಾರಿ ಬ್ಯಾಂಕ್‌ಗಳ ವೈಶಿಷ್ಟವನ್ನು ಪರಿಗಣಿಸಬೇಕು ಹಾಗೂ ಸಹಕಾರಿ ಬ್ಯಾಂಕ್‌ಗಳನ್ನು ಖಾಸಗಿ ಬ್ಯಾಂಕ್‌ಗಳ ಜೊತೆ ವಿಲೀನಗೊಳಿಸುವುದು ಬೇಡ ಎಂದವರು ಆರ್‌ಬಿಐಯನ್ನು ಒತ್ತಾಯಿಸಿದರು.
ಸಹಕಾರಿ ಬ್ಯಾಂಕ್ ವಲಯದಿಂದ ಕೆಲವು ತಪ್ಪಾಗಿದ್ದರೆ ಕೆಲವೊಂದು ಗುಣಾತ್ಮಕ ಬದಲಾವಣೆ ಮಾಡುವ ಮೂಲಕ ಅವುಗಳನ್ನು ಇನ್ನಷ್ಟು ಸಶಕ್ತಗೊಳಿಸಬೇಕು. ಆದರೆ ಇವನ್ನು ಖಾಸಗಿ ಬ್ಯಾಂಕ್‌ಗಳ ಜೊತೆ ವಿಲೀನಗೊಳಿಸುವುದು ಬೇಡ ಎಂದವರು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿದೇಶಿ ಬಂಡವಾಳದ ಬದಲು ಜನತೆಯಿಂದ ಬಂಡವಾಳ ಸಂಗ್ರಹಿಸುವ ಗಡ್ಕರಿಯವರ ಚಿಂತನೆಗೆ ಸಹಮತ ಸೂಚಿಸಿದರು. ಇದಕ್ಕಾಗಿ ಯೋಜನೆಗಳು ಹೆಚ್ಚಿನ ಪಾರದರ್ಶಕತೆಯಿಂದ ಕೂಡಿರಬೇಕು ಹಾಗೂ ಕ್ರಿಯಾಶೀಲವಾಗಿರಬೇಕು ಎಂದ ಅವರು, ವಿಶ್ವದಾದ್ಯಂತ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಿದೆ. ಆದರೆ ಆರ್‌ಬಿಐ ಇನ್ನೂ ಬಡ್ಡಿದರ ಕಡಿಮೆಗೊಳಿಸಿಲ್ಲ ಎಂದರು. ಯಾವಾಗಲೂ ಸಂಪ್ರದಾಯವಾದಿಗಳಾಗಿರಬಾರದು. ಅಭಿವೃದ್ಧಿಯಾಗಬೇಕಾದರೆ ಕೆಲವೊಮ್ಮೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು . ಸಾಲದ ಬಡ್ಡಿದರವನ್ನು ಕೇವಲ ಶೇ.1ರಷ್ಟು ಕಡಿಮೆಗೊಳಿಸಿ ನೋಡಿ, ಆಗ ಮಹಾರಾಷ್ಟ್ರ ರಾಜ್ಯವೇ ಸುಮಾರು 1 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಬಲ್ಲದು ಎಂದು ಫಡ್ನವೀಸ್ ಹೇಳಿದರು.







