ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಹೋರಾಟ ಅಗತ್ಯ: ಸಚಿವ ಕಾಗೋಡು ತಿಮ್ಮಪ್ಪ

ಬೆಂಗಳೂರು, ಸೆ. 15: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಷಯದಲ್ಲಿ ಕೇವಲ ಭಾಷಣಗಳಿಂದ ಏನೂ ಆಗುವುದಿಲ್ಲ. ಈ ಬಗ್ಗೆ ಜನಜಾಗೃತಿ ಮೂಡಿಸಲು ಹೋರಾಟ ಮಾಡಬೇಕಾದುದು ಅತ್ಯಗತ್ಯ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇವಲ ಭಾಷಣಗಳಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ದೊರೆಯಲಿದೆ ಎಂಬ ಭ್ರಮೆಯಿಂದ ಹೊರ ಬಂದು ಜನ ಜಾಗೃತಿಗೆ ಹೋರಾಟ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
‘ಜಾತಿ ವಿನಾಶ’ಕ್ಕಾಗಿ ಬಸವಣ್ಣ ಹೋರಾಟ ನಡೆಸಿದರು. ಆದರೆ, ಬಸವಣ್ಣ ‘ಐಕ್ಯ’ರಾದರು ಎಂದು ಹೇಳುತ್ತಾರೆ. ಇದರ ಅರ್ಥವೇನು ಎಂದು ಪ್ರಶ್ನಿಸಿದ ಕಾಗೋಡು ತಿಮ್ಮಪ್ಪ, ಎಲ್ಲ ವರ್ಗದ ಜನರನ್ನು ಒಟ್ಟಿಗೆ ಸೇರಿಸಿ ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಬದಲಾವಣೆಗೆ ಶ್ರಮಿಸಿದರು ಎಂದು ಸ್ಮರಿಸಿದರು.
‘ಹಿಂದೂ ಧರ್ಮ, ಹಿಂದೂ ನಾವೆಲ್ಲರೂ ಒಂದು ಎಂದು ಹೇಳ್ತಾರೆ. ಎಲ್ಲಿದೆ ಹಿಂದೂಧರ್ಮ. ಇಲ್ಲಿರುವುದು ಜಾತಿ ಮಾತ್ರ. ಹಿಂದೂಧರ್ಮ ಎಂದು ಅಧಿಕೃತ ಘೋಷಣೆ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ಲಿಂಗಾಯತ ಸ್ವತಂತ್ರ ಧರ್ಮಕ್ಕಾಗೊ ಹೋರಾಟಕ್ಕೆ ಇಳಿಯಿರಿ ಎಂದರು.





