ಖಿನ್ನತೆಯಿಂದ ದೂರವಿರಲು ಮಾದಕ ವಸ್ತುಗಳ ಸೇವನೆ ಬಿಡಬೇಕು: ಡಾ.ಪಿ.ವಿ.ಭಂಡಾರಿ

ಚಿಕ್ಕಮಗಳೂರು, ಸೆ.15: ಯುವಜನತೆ ಮಾನಸಿಕ ಖಿನ್ನತೆಯಿಂದ ದೂರವಿರಬೇಕಾದರೆ ಇನ್ನೊಬ್ಬರೊಂದಿಗೆ ತಮ್ಮನ್ನು ತುಲನೆ ಮಾಡಿಕೊಳ್ಳುವುದು, ಇತರರಿಂದ ನಿರೀಕ್ಷಿಸುವುದು, ಅತಿಯಾದ ಆಸೆ ಮತ್ತು ಮಾದಕ ವಸ್ತುಗಳ ಸೇವನೆಯನ್ನು ಬಿಡಬೇಕು ಎಂದು ಉಡುಪಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಸಲಹೆ ಮಾಡಿದರು.
ಅವರು ಶುಕ್ರವಾರ ನಗರದ ಸಂತ ಜೋಸೇಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಯುವ ಜನತೆಯಲ್ಲಿ ಮಾನಸಿಕ ಖಿನ್ನತೆ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾನಸಿಕ ಖಿನ್ನತೆ ಎನ್ನುವುದು ಮೆದುಳಿನ ಖಾಯಿಲೆ, ಮೆದುಳಿನಲ್ಲಿ ರಾಸಾಯನಿಕಗಳ ಬದಲಾವಣೆಯಿಂದಾಗಿ ಈ ರೋಗ ಬರುತ್ತದೆ. ಕಾರಣವಿಲ್ಲದೆ ಬೇಸರ ಮಾಡಿಕೊಳ್ಳುವುದು, ಎಲ್ಲಾ ಆಸಕ್ತಿಗಳನ್ನು ಕಳೆದುಕೊಳ್ಳುವುದು ಕಾರಣವಿಲ್ಲದೆ ಸುಸ್ತಾಗುವುದು, ಹತಾಶರಾಗುವುದು, ನಕಾರಾತ್ಮಕವಾಗಿ ಚಿಂತಿಸುವುದು ಈ ರೋಗಕ್ಕೆ ತುತ್ತಾಗಿರುವುದರ ಲಕ್ಷಣ ಎಂದರು.
ಹದಿಹರೆಯದವರು ಮತ್ತು ಯುವ ಜನತೆ ಮಾನಸಿಕ ಖಿನ್ನತೆಗೆ ಹೆಚ್ಚಾಗಿ ಬಲಿಯಾಗುತ್ತಾರೆ. ಎಂದ ಅವರು ಪರೀಕ್ಷೆಯ ಆತಂಕ, ಭಯ, ಅತ್ಯಂತ ಹತ್ತಿರದವರ ಸಾವು, ಸ್ನೇಹಿತರು, ಪ್ರೇಮ ವೈಫಲ್ಯ ಮತ್ತು ಮಾದಕ ವಸ್ತುಗಳ ಸೇವನೆ ಇಂತಹ ಕಾರಣಗಳಿಂದ ಖಿನ್ನತೆಗೆ ಒಳಗಾಗುತ್ತಾರೆ. ಮನೋವೈದ್ಯರೆಂದರೆ ಬರೀ ಹುಚ್ಚರ ಡಾಕ್ಟರಲ್ಲ. ಹಾಗಾಗಿ ಅವರ ಬಗ್ಗೆ ಭಯ ಬೇಡ ಎಂದ ಅವರು ಖಿನ್ನತೆಯ ಲಕ್ಷಣ ಕಂಡು ಬಂದ ತಕ್ಷಣ ಮನೋವೈದ್ಯರನ್ನಾಗಲಿ ಅಥವಾ ಕನಿಷ್ಠ ಕುಟುಂಬದ ವೈದ್ಯರನ್ನಾಗಲಿ ಭೇಟಿ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಇನ್ ಫ್ಯಾಂಟ್ ಜೀಸಸ್ ಶಾಲೆಯ ನಿರ್ದೇಶಕ ಫಾದರ್ ಅಮರ್ ಲೋಬೋ ಮಾತನಾಡಿ, ಯುವ ಜನತೆ ಹಿಂದೆ ಅಗಿದ್ದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಮುಂದಿನ ದಾರಿಯ ಬಗ್ಗೆ ಸರಿಯಾದ ನಿರ್ಧಾರ ಕೈಗೊಂಡು ಅದರ ಪ್ರಕಾರ ನಡೆಯಬೇಕು ಆಗ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಬಿಜೆಪಿ ನಗರ ಉಪಾಧ್ಯಕ್ಷ ದಿನೇಶ್ ಗುಪ್ತಾ ಮಾತನಾಡಿದರು. ಪ್ರಾಂಶುಪಾಲ ವಿನ್ಸೆಂಟ್ ಕಾಡೋಜಾ ಅಧ್ಯಕ್ಷತೆ ವಹಿಸಿದ್ದರು. ಎಂ.ಎ.ವಿನಯ್ ಕುಮಾರ್ ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ಇಂಧನವನ್ನು ಉಳಿಸುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಸೈಕಲ್ ರ್ಯಾಲಿ ನಡೆಸಿದರು.
ಕಾರ್ಯಕ್ರಮದಲ್ಲಿ ನಗರ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೈಯದ್ ನಗ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು, ಉಪನ್ಯಾಸಕರಾದ ಜೆನ್ನೀಫರ್ ಡಿಸೋಜ ಸ್ವಾಗತಿಸಿದರು.







