ಕಲ್ಯಾಣಪುರ: ಹರೇಕಳ ಹಾಜಬ್ಬರಿಗೆ ಸನ್ಮಾನ

ಉಡುಪಿ, ಸೆ.15: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ಅಪೂರ್ವ ಸಾಧಕ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಹಾಜಬ್ಬರ ಚಿತ್ರಣವನ್ನು ಪ್ರಸ್ತುತಪಡಿಸಿದ ಪತ್ರಕರ್ತ ಗುರುವಪ್ಪ ಬಾಳೆಪುಣಿ, ಹಾಜಬ್ಬ ಓರ್ವ ಶುದ್ಧಾತ್ಮರಾಗಿದ್ದು ಜೀವನ ಕುತೂಹಲ, ಆಂತರಿಕ ಸೌಂದರ್ಯ ಮತ್ತು ಸಾಮಾಜಿಕ ಕಾಳಜಿಗಳ ಮೂಲಕ ವಿಶ್ವವಿಖ್ಯಾತಿಯನ್ನು ಪಡೆದವರು. ಅವರು ತಮ್ಮ ವಿಶಿಷ್ಟ ಸಾಧನೆಯ ಮೂಲಕ ಬಡವರ ಪಾಲಿಗೆ ಅಕ್ಷರ ದೊರಕಿಸಿ ಕೊಟ್ಟು ಸಮಗ್ರ ದೇಶಕ್ಕೆ ಮಾದರಿಯಾದರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸನ್ನಡತೆಯೊಂದಿಗೆ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲೆನ್ ಲೂಯಿಸ್ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಹರಿಣಾಕ್ಷಿ ಎಂ.ಡಿ. ಸ್ವಾಗತಿಸಿದರು. ಉಪ ನ್ಯಾಸಕ ನಿತ್ಯಾನಂದ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.







