ಬಾಂಗ್ಲಾ ಪ್ರಧಾನಿ ಜೊತೆ ಸುಷ್ಮಾ ಸ್ವರಾಜ್ ಮಾತುಕತೆ
ರೊಹಿಂಗ್ಯಾ ವಲಸಿಗರ ಪ್ರಕರಣ
.jpg)
ಹೊಸದಿಲ್ಲಿ, ಸೆ.15: ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಹಿಂಸಾಚಾರದಿಂದ ಕಂಗೆಟ್ಟು ದೇಶ ಬಿಟ್ಟು ಪಲಾಯನ ಮಾಡಿರುವ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ಮರಳಿ ಕರೆಸಿಕೊಳ್ಳುವಂತೆ ಮ್ಯಾನ್ಮಾರ್ ಮೇಲೆ ದ್ವಿಪಕ್ಷೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹಾಕಲಾಗುತ್ತಿದೆ ಎಂದು ಭಾರತದ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ ಎಂದು ಬಾಂಗ್ಲಾದೇಶದ ಪ್ರಧಾನಿ ಹೇಳಿದ್ದಾರೆ.
ಬಾಂಗ್ಲಾಪ್ರಧಾನಿಗೆ ದೂರವಾಣಿ ಕರೆ ಮಾಡಿದ ಸುಷ್ಮಾ, ರೊಹಿಂಗ್ಯ ವಲಸಿಗರ ಸಮಸ್ಯೆಯ ಇತ್ಯರ್ಥಕ್ಕಾಗಿ ಬಾಂಗ್ಲಾದೇಶಕ್ಕೆ ಸರ್ವರೀತಿಯ ನೆರವು ನೀಡುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಬಾಂಗ್ಲಾದಲ್ಲಿ ಸುಮಾರು 3,00,000 ರೊಹಿಂಗ್ಯಾ ನಿರಾಶ್ರಿತರು ಇದ್ದಾರೆ. ಮ್ಯಾನ್ಮಾರ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಆಗಸ್ಟ್ 25ರ ಬಳಿಕ ಆ ದೇಶದಿಂ ಹೆಚ್ಚುವರಿಯಾಗಿ 3,00,000 ರೊಹಿಂಗ್ಯಾ ನಿರಾಶ್ರಿತರು ವಲಸೆ ಬಂದಿದ್ದಾರೆ ಎಂದು ಬಾಂಗ್ಲಾದ ಅಧಿಕಾರಿಗಳು ತಿಳಿಸಿದ್ದಾರೆ.
ರೊಹಿಂಗ್ಯ ನಿರಾಶ್ರಿತರ ಬಗ್ಗೆ ಬಾಂಗ್ಲಾ ಮತ್ತು ಭಾರತ ದೇಶಗಳು ಏಕಪ್ರಕಾರ ನಿಲುವು ಹೊಂದಿದ್ದು, ಬಾಂಗ್ಲಾದೇಶದ ನಿಲುವಿಗೆ ಸಚಿವೆ ಸುಷ್ಮಾ ಸ್ವರಾಜ್ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಸ್ವರಾಜ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಹಸೀನಾ ಅವರ ಸಹಾಯಕ ಮಾಧ್ಯಮ ಕಾರ್ಯದರ್ಶಿ ನಝ್ರುಲ್ ಇಸ್ಲಾಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಮ್ಯಾನ್ಮಾರ್ ರೊಹಿಂಗ್ಯ ಮುಸ್ಲಿಮರ ವಿರುದ್ಧ ನಡೆಸುತ್ತಿರುವ ದೌರ್ಜನ್ಯವನ್ನು ಕೊನೆಗೊಳಿಸಬೇಕು ಎಂದು ಸುಷ್ಮಾ ಅಭಿಪ್ರಾಯಿಸಿದ್ದಾರೆ ಎಂದೂ ನಝ್ರುಲ್ ಇಸ್ಲಾಮ್ ತಿಳಿಸಿದ್ದಾರೆ .
ರೊಹಿಂಗ್ಯ ನಿರಾಶ್ರಿತರಿಗೆ ತಾತ್ಕಾಲಿಕ ನೆಲೆ ಒದಗಿಸಲು ಬಾಂಗ್ಲಾ ಸಿದ್ಧವಿದೆ. ಆದರೆ ಅವರು ಬಾಂಗ್ಲಾದಲ್ಲೇ ಸುದೀರ್ಘಾವಧಿ ನೆಲೆ ನಿಂತರೆ ಬಹಳಷ್ಟು ಸಮಸ್ಯೆ ಉದ್ಭವಿಸಬಹುದು ಎಂದು ಶೇಖ್ ಹಸೀನಾ ತಿಳಿಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ರೊಹಿಂಗ್ಯ ವಲಸಿಗರ ವಿಷಯವನ್ನು ಪ್ರಸ್ತಾವಿಸುವುದಾಗಿ ಹಸೀನಾ ತಿಳಿಸಿದ್ದಾರೆ.
ಗುರುವಾರ 53 ಟನ್ ಪರಿಹಾರ ಸಾಮಾಗ್ರಿಗಳನ್ನು ಬಾಂಗ್ಲಾಕ್ಕೆ ರವಾನಿಸಿದ್ದ ಭಾರತ, ಬಿಕ್ಕಟ್ಟನ್ನು ಪರಿಹರಿಸಲು ಬಾಂಗ್ಲಾದೇಶಕ್ಕೆ ಸರ್ವ ನೆರವನ್ನೂ ನೀಡುವುದಾಗಿ ಘೋಷಿಸಿತ್ತು. ಬಾಂಗ್ಲಾದೇಶಕ್ಕೆ 7,000 ಟನ್ ಪರಿಹಾರ ಸಾಮಾಗ್ರಿ ಒದಗಿಸುವುದಾಗಿ ಭಾರತದ ಹೈಕಮಿಷನರ್ ಹರ್ಷವರ್ಧನ್ ತಿಳಿಸಿದ್ದಾರೆ.







