ಸುಗ್ರೀವಾಜ್ಞೆ ಅಂಕಿತಕ್ಕೆ ರಾಷ್ಟ್ರಪತಿಗೆ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ ಮನವಿ
ಪರಿಶಿಷ್ಟರ ಭಡ್ತಿ ಮೀಸಲಾತಿ
ಬೆಂಗಳೂರು, ಸೆ. 15: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಮುಂಭಡ್ತಿಯಲ್ಲಿ ಮೀಸಲಾತಿ ನೀತಿ ಮುಂದುವರೆಸುವ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವಂತೆ ರಾಷ್ಟ್ರಪತಿಗಳಲ್ಲಿ ಮನವಿ ಮಾಡಲಾಗಿದೆ ಎಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಕೆ.ಶಿವಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಮುಂಭಡ್ತಿ ಮೀಸಲಾತಿ ಸಂವಿಧಾನದತ್ತ ಹಕ್ಕಾಗಿದ್ದು, ಅದನ್ನು ಮುಂದುವರೆಸಲು ಸರಕಾರ ಕಾರ್ಯೋನ್ಮುಖವಾಗಿದೆ. ಅದಕ್ಕಾಗಿ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನೂ ನೇಮಿಸಲಾಗಿತ್ತು. ಆ ಸಮಿತಿಯು ಮೀಸಲಾತಿ ನೀತಿಯನ್ನು ಸಮರ್ಥಿಸಿ ಇನ್ನೂ 32 ಸಾವಿರಕ್ಕೂ ಹೆಚ್ಚು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇರುವುದನ್ನು ಖಚಿತಪಡಿಸಿದ್ದು, ಸದರಿ ವರದಿಯನ್ನು ಸಚಿವ ಸಂಪುಟದಲ್ಲಿ ಪರಿಗಣಿಸಿ ಅಂಗೀಕರಿಸಿದ್ದರೂ, ಆದೇಶ ಹೊರಡಿಸಿರುವುದಿಲ್ಲ ಎಂದರು.
ರಾಷ್ಟ್ರಪತಿಗಳಲ್ಲಿ ಒಟ್ಟು ಮೂರು ಮನವಿ ಸಲ್ಲಿಸಲಾಗಿದ್ದು ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಂಭಡ್ತಿ ಮೀಸಲಾತಿ, ವಾಸಿಸುವವನೇ ಮನೆ ಒಡೆಯ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಕಲ್ಪಿಸುವ ಮಸೂದೆಗಳಿಗೆ ಅಂಕಿತ ನೀಡಲು ರಾಜ್ಯಪಾಲರಿಗೆ ಆದೇಶ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ಪರಿಶಿಷ್ಟರ ಮುಂಭಡ್ತಿ ವಿಚಾರದಲ್ಲಿ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅಧಿವೇಶನ ಕರೆದು ಮುಂದಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರೂ ಆಗಿರುವ ಶಾಸಕ ಕಳಲೆ ಕೇಶವಮೂರ್ತಿ, ಸಮಿತಿ ಜಂಟಿ ನಿರ್ದೇಶಕ ಮಲ್ಲಪ್ಪ ಕಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







