ತಾಲೂಕು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸಚಿವೆ ಡಾ. ಗೀತಾಮಹದೇವಪ್ರಸಾದ್ ಸೂಚನೆ

ಗುಂಡ್ಲುಪೇಟೆ, ಸೆ.15: ಜಿಲ್ಲೆಯಲ್ಲಿಯೇ ಪ್ರಥಮವಾಗಿ ಗುಂಡ್ಲುಪೇಟೆ ತಾಲೂಕು ಬಯಲು ಬಹಿರ್ದೆಸೆ ಮುಕ್ತವಾಗಿ ಮಾದರಿ ಕ್ಷೇತ್ರವಾಗುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಕ್ಕರೆ ಹಾಗೂ ಸಣ್ಣಕೈಗಾರಿಕೆ ಸಚಿವೆ ಡಾ. ಗೀತಾಮಹದೇವಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಯಲು ಶೌಚಮುಕ್ತ ಕಾರ್ಯಕ್ರಮವು ಸಮಾಜದಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ತಾಲೂಕಿನ 34 ಗ್ರಾಮಪಂಚಾಯತ್ ಗಳು 180 ಗ್ರಾಮಗಲ್ಲಿ ಈಗಾಗಲೇ 15 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಹಾಗೆಯೇ ಅಕ್ಟೋಬರ್ 2 ರ ಗಾಂಧಿಜಯಂತಿವರೆಗೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಶೌಚಾಲಯ ಮಾಡಲು ನೋಡಲ್ ಅಧಿಕಾರಿಗಳ ಜೊತೆಗೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಣತೊಡಬೇಕು ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ಹರೀಶ್‍ಕುಮಾರ್ ಮಾತನಾಡಿ, ಶೌಚಾಲಯ ಸಮರ ಎಂಬ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮುಕ್ತಮಾಡಲು 10 ಗ್ರಾಮಪಂಚಯತ್ ಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕಮಾಡಲಾಗಿದೆ. ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲೂ ಬೆಳಗ್ಗೆ 6ರಿಂದ ಪಿಡಿಒಗಳ ಜೊತೆ ಶೌಚಾಲಯ ನಿರ್ಮಾಣ ಪರಿಶೀಲನೆ ಸೇರಿದಂತೆ ಗುರಿ ಸಾಧನೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಶೇ. 60 ರಷ್ಟು ಶೌಚಾಲಯ ನಿರ್ಮಾಣವಾಗಿದೆ ಉಳಿದ 40 ರಷ್ಟು ನೀರಿನ ಸಮಸ್ಯೆ ಮತ್ತು ಜಾಗದ ಸಮಸ್ಯೆಯಿಂದ ಕುಂಠಿತಗೊಂಡಿದೆ ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 2 ರಂದು ಯಳಂದೂರು ಮತ್ತು 15 ರಂದು ಗುಂಡ್ಲುಪೇಟೆ ತಾಲೂಕುಗಳನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ಘೋಷಣೆ ಮಾಡಲಾಗುವುದು. ಸಚಿವೆ ಬಯಕೆಯಂತೆ ತಾಲೂಕಿನಲ್ಲಿ ಬೃಹತ್ ಆರೋಗ್ಯಮೇಳ, 50 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗಮೇಳ ಆಯೋಜಿಸಲಾಗುವುದು ಎಂದರು.
ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡ ಸಿಇಒ
ಶೌಚಾಲಯ ನಿರ್ಮಾಣದ ಪ್ರಗತಿಯಲ್ಲಿ ಹಿಂದೆ ಇರುವ ಪಿಡಿಒಗಳಾದ ಮಹೇಶ್, ಮತ್ತು
ಭೋಜೇಶರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸರ್ಕಾರದ ಕೆಲಸದಲ್ಲಿದ್ದಾಗ
ಸಾರ್ವಜನಿಕರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ಯಾವುದೇ
ಸಮಸ್ಯೆಗಳು ಎದುರಾದಾಗಲೂ ಪಲಾಯನ ಮಾಡದೆ ನೇರವಾಗಿ ಎದುರಿಸಬೇಕು ಅದು
ಬಿಟ್ಟು ಕಚೇರಿಗಳಿಂದ ದೂರವಿರುವುದು ಸರಿಯಲ್ಲ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ
ನಿಮ್ಮ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಚಿವೆಯ ಮೆಚ್ಚುಗೆ ಪಾತ್ರರಾದ ಇಒ ಎಚ್.ಎಸ್. ಬಿಂದ್ಯಾ
ಪ್ರಭಾರ ಇಒಆಗಿ ಕಾರ್ಯನಿರ್ವಹಿಸುತ್ತಿರುವ ಎಚ್.ಎಸ್.ಬಿಂದ್ಯಾ ಒಂದೇ ತಿಂಗಳಲ್ಲಿ 400
ಶೌಚಾಲಯ ನಿರ್ಮಾಣ ಮಾಡುವ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂರು ತಿಂಗಳ ಮುಂಚೆಯೆ ಇವರನ್ನು ನೇಮಕ ಮಾಡಿದ್ದರೆ ಇಲ್ಲಿಯವರೆಗೆ ಶೇ.100 ಗುರಿ ಸಾಧಿಸಬಹುದಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್, ಉಪಾಧ್ಯಕ್ಷೆ ರೂಪ, ಚಾಮರಾಜನಗರ ತಾಪಂ ಅಧ್ಯಕ್ಷ ಚಂದ್ರು, ಜಿ.ಪಂ..ಸದಸ್ಯ ಕೆ.ಎಸ್. ಮಹೇಶ್, ಬಿ.ಕೆ.ಬೊಮ್ಮಯ್ಯ, ಪಿ.ಚೆನ್ನಪ್ಪ, ಅಶ್ವಿನಿವಿಶ್ವನಾಥ್, ಜಿ.ಪಂ. ಜಿಲ್ಲಾ ಉಪಕಾರ್ಯದರ್ಶಿ ಮುನಿರಾಜಪ್ಪ, ತಾಪಂ ಕಾರ್ಯನಿರ್ವಹಕಾಧಿಕಾರಿ ಎಚ್.ಎಸ್.ಬಿಂದ್ಯಾ. ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಇದ್ದರು.







