ತಳಿ ಅಭಿವೃದ್ಧಿ ಶಾಸ್ತ್ರ 21 ನೆ ಶತಮಾನದ ಹಸಿರು ಕ್ರಾಂತಿಗೆ ಸಹಕಾರಿ: ಡಾ. ಕುಲದೀಪ್ ಸಿಂಗ್
ಬೆಂಗಳೂರು, ಸೆ.15: ಸಾಂಪ್ರದಾಯಿಕ ವಿಧಾನ ಮತ್ತು ಪದ್ಧತಿಗಳ ಆಧಾರಿತ ತಳಿ ಅಭಿವೃದ್ಧಿ ಶಾಸ್ತ್ರವು ಹೊಸ ತಳಿಗಳ ಅಭಿವೃದ್ಧಿ ಫಲಶೃತಿಯಾಗಿದೆ. ಈ ತಳಿಗಳ 20ನೆ ಶತಮಾನದ ಹಸಿರು ಕ್ರಾಂತಿಗೆ ಬಹಳಷ್ಟು ಸಹಕಾರಿಯಾಗಿದೆ ಎಂದು ದೆಹಲಿಯ ರಾಷ್ಟ್ರೀಯ ಸಸ್ಯ ಅಭಿವೃದ್ಧಿ ಸಂಪನ್ಮೂಲಗಳ ಬ್ಯೂರೋ ನಿರ್ದೇಶಕ ಡಾ. ಕುಲದೀಪ್‌ಸಿಂಗ್ ತಿಳಿಸಿದ್ದಾರೆ.
ನಗರದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಿದ್ದ ‘ಮುಂದಿನ ಪೀಳಿಗೆಯ ತಳಿ ಅಭಿವೃದ್ಧಿ ಶಾಸ್ತ್ರದ ರಾಷ್ಟ್ರೀಯ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, 21 ನೆ ಶತಮಾನದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಹಾಗೂ ಮಾನವನ ದಿನನಿತ್ಯದ ಚಟುವಟಿಕೆಗಳಿಂದ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಹೊಸ ಜೈವಿಕ ಹಾಗೂ ಅಜೈವಿಕ ಒತ್ತಡಗಳಿಂದ ಬೆಳೆಗಳ ಇಳುವರಿ ಕ್ಷೀಣಿಸುತ್ತಿದೆ ಎಂದರು.
ಬೆಂಗಳೂರು ಕೃಷಿ ವಿಶ್ವದ್ಯಾನಿಲಯದ ಕುಲಪತಿ ಡಾ. ಎಚ್.ಶಿವಣ್ಣ ಮಾತನಾಡಿ, ಒತ್ತಡಗಳನ್ನು ಮೀರಿ ಬೆಳೆಗಳ ಇಳುವರಿ ಹೆಚ್ಚಿಸಲು ವಂಶವಾಹಿಶಾಸ್ತ್ರದ ವಿಧಾನಗಳ ಬಳಕೆ ಅನಿವಾರ್ಯ. ವಂಶಗ್ರಾಹಿಶಾಸ್ತ್ರ ವಿಧಾನಗಳು, ಅನುವಂಶೀಯ ಹಾಗೂ ಮೂಲ ಅನುವಂಶೀಯತೆಯ ಭಿನ್ನತೆಗಳ ಮೂಲ ವ್ಯತ್ಯಾಸಗಳನ್ನು ಕಂಡು ಹಿಡಿದು ಅವುಗಳನ್ನು ಡಿಎನ್‌ಎ ಗುರುತುಗಳ ಸಹಾಯದಿಂದ ರೈತರಿಗೆ, ಅಂತಿಮ ಬಳಕೆದಾರರಿಗೆ, ಸಂಸ್ಕರಣಾ ಮತ್ತು ಕೈಗಾರಿಕೆಗಳಿಗೆ ಮುಖ್ಯವಾದ ಗುಣಲಕ್ಷಣಗಳನ್ನು ಬೆಳೆಗಳ ತಳಿಗಳಲ್ಲಿ ಸ್ಥಿರೀಕರಿಸಲು ಬಹು ಸಹಕಾರಿಯಾಗಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಡಾ ಶೈಲಜಾ ಹಿತ್ತಲಮನಿ, ಡಾ. ಎಸ್.ರಾಜೇಂದ್ರ ಪ್ರಸಾದ್, ಡಾ.ಎಂ.ಬೈರೇಗೌಡ, ಡಾ. ಕೆ. ಶಿವರಾಮು ಮತ್ತು ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.







