ಪಿಐಎಲ್ ನಿರ್ಬಂಧ: ಆದೇಶ ಮರು ಪರಿಶೀಲಿಸಲು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ರಾಮಚಂದ್ರಾಪುರ ಮಠದ ವಿರುದ್ಧ ಸುಳ್ಳು ಪಿಐಎಲ್ ಸಲ್ಲಿಕೆ ವಿಚಾರ
ಬೆಂಗಳೂರು, ಸೆ.15: ಹೊಸನಗರದ ರಾಮಚಂದ್ರಾಪುರ ಮಠದ ವಿರುದ್ಧ ಸುಳ್ಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದವರ ಪರವಾಗಿ ವಾದಿಸಿದ್ದ ಕಾರಣ, ಮುಂದಿನ ದಿನಗಳಲ್ಲಿ ಯಾವುದೇ ಪಿಐಎಲ್‌ಗಳಿಗೆ ವಕಾಲತ್ತು ಹಾಕದಂತೆ ನಿರ್ಬಂಧ ವಿಧಿಸಿ ವಿಭಾಗೀಯ ಪೀಠ ನೀಡಿದ್ದ ಆದೇಶ ಮರುಪರಿಶೀಲಿಸುವಂತೆ ಕೋರಿ ವಕೀಲ ಕೆ.ಎನ್. ಪ್ರವೀಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಪ್ರವೀಣ್ ಕುಮಾರ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಪೀಠ, ಅರ್ಜಿದಾರರು ಪಿಐಎಲ್‌ಗಳಿಗೆ ವಕಾಲತ್ತು ಸಲ್ಲಿಸದಂತೆ 2013ರಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ವಿಭಾಗೀಯ ಪೀಠ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲವೆಂದು ತಿಳಿಸಿತು.
ಈ ವೇಳೆ ಹಾಜರಿದ್ದ ವಕೀಲ ಪ್ರವೀಣ್ ಕುಮಾರ್, ತಮ್ಮ ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಮರುಪರಿಶೀಲನಾ ಅರ್ಜಿಯನ್ನು ಇತ್ಯರ್ಥಪಡಿಸಿತು.
ಪ್ರಕರಣವೇನು: ರಾಮಚಂದ್ರಾಪುರ ಮಠದ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದ್ದ ಅಸ್ತ್ರ ಟ್ರಸ್ಟ್ ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ 2013ರಲ್ಲಿ ಈ ಸಂಬಂಧ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ವೇಳೆ ಮಠದ ವಿರುದ್ಧ ದುರುದ್ದೇಶದಿಂದ ಸುಳ್ಳು ಪಿಐಎಲ್ ದಾಖಲಿಸಿರುವ ವಿಚಾರ ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಇದರಿಂದ ಅರ್ಜಿದಾರರಿಗೆ ತಲಾ 50 ಸಾವಿರ ದಂಡ ವಿಧಿಸಿದ್ದ ಹೈಕೋರ್ಟ್, ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಕೆ.ಎನ್.ಪ್ರವೀಣ್ ಕುಮಾರ್‌ಗೆ ಯಾವುದೇ ಪಿಐಎಲ್‌ಗಳಿಗೆ ವಕೀಲರಾಗಿ ಹಾಜರಾಗದಂತೆ ನಿರ್ಬಂಧ ವಿಧಿಸಿತ್ತು.







