ದಲಿತ ವಿರೋಧಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ: ದಸಂಸ ಆಗ್ರಹ

ಮೈಸೂರು, ಸೆ.15: ರಾಜ್ಯ ಸರ್ಕಾರ ಹಾಗೂ ದಲಿತರನ್ನು ಹತ್ತಿಕ್ಕಲು ಕೋಮುವಾದಿ ಕೇಂದ್ರ ಸರ್ಕಾರದ ನಾಮನಿರ್ದೇಶಿತ ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ಅವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ರಾಜ್ಯ ಸರ್ಕಾರ ದಲಿತರ ಪರವಾಗಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡರೂ, ಅದು ಸಂವಿಧಾನಾತ್ಮಕವಾಗಿದ್ದರೂ ಅವುಗಳನ್ನು ವಿರೋಧಿಸುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸಂವಿದಾನದತ್ತವಾದ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಇವರನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ದಲಿತರ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಟು ಪರಿಶಿಷ್ಟ ಜಾತಿ ವರ್ಗಗಳ ಗುತ್ತಿಗೆದಾರರಿಗೆ ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಶೇ.21ರಷ್ಟು ಮೀಸಲಾತಿ ನಿಗದಿಪಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆದರೆ ರಾಜ್ಯಪಾಲರು ಅಂಕಿತ ಹಾಕದೆ ತಿರಸ್ಕರಿಸಿದ್ದಾರೆ. ಇಂತಹ ದಲಿತ ವಿರೋಧಿ ರಾಜ್ಯಪಾಲರು ರಾಜ್ಯಕ್ಕೆ ಬೇಕಿಲ್ಲ. ಕೂಡಲೇ ಇವರನ್ನು ವಾಪಸ್ ಕರೆಸಿಕೊಳ್ಳಿ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕ ರಾಜಶೇಖರ ಕೋಟೆ, ಗಂಗಾಧರ ಹೈವೆ, ನಂಜನಗೂಡು ಸುರೇಶ್, ಮಹದೇವಸ್ವಾಮಿ, ಆಲಗೂಡು ಶಿವಣ್ಣ, ಸೆಂದಿಲ್ ಕುಮಾರ್, ಗುರುಮೇದರ್, ಉಮೇಶ್ ಬಂಬೂ ಬಜಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.







