ಭಾರತ ಮಧ್ಯೆ ಪ್ರವೇಶಕ್ಕೆ ಆಗ್ರಹಿಸಿ ಮುಸ್ಲಿಂ ಮಹಿಳಾ ಒಕ್ಕೂಟ ಧರಣಿ
ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಹತ್ಯೆ

ಶಿವಮೊಗ್ಗ, ಸೆ.15: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಭಾರತ ಸರಕಾರ ಮಧ್ಯೆ ಪ್ರವೇಶಿಸಿ, ಮ್ಯಾನ್ಮಾರ್‌ಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಮುಸ್ಲಿಂ ಮಹಿಳಾ ಒಕ್ಕೂಟವು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತು.
ಕಳೆದ ಸುಮಾರು 50 ವರ್ಷಗಳಿಂದ ಮ್ಯಾನ್ಮಾರ್‌ನಲ್ಲಿರುವ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಅವ್ಯಾಹತ ವಾಗಿ ದೌರ್ಜನ್ಯ ನಡೆಯುತ್ತಿದೆ. ಇಲ್ಲಿಯವರೆಗೂ ಈ ಸಮುದಾಯಕ್ಕೆ ಮ್ಯಾನ್ಮಾರ್‌ದಲ್ಲಿ ಶಾಶ್ವತ ನಾಗರಿಕತೆಯನ್ನೇ ನೀಡದೆ ಹಿಂಸಿಸಲಾಗುತ್ತಿದೆ. ಅಮಾನವೀಯವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಧರಣಿನಿರತರು ದೂರಿದ್ದಾರೆ. ಪ್ರಸಕ್ತ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮತ್ತೆ ದೌರ್ಜನ್ಯ, ಹಿಂಸೆ ನಡೆಸಲಾಗುತ್ತಿದೆ. ಮಾರಣಹೋಮ ನಡೆಸಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಸಣ್ಣ ಮಕ್ಕಳನ್ನು ಹಿಂಸಿಸಿ ಕೊಲೆ ಮಾಡಲಾಗುತ್ತಿದೆ. ಜನಾಂಗೀಯ ನಿಂದನೆಗಳು ತೀವ್ರಗೊಂಡಿವೆ ಎಂದು ಧರಣಿನಿರತರು ತಿಳಿಸಿದ್ದಾರೆ. ಮ್ಯಾನ್ಮಾರ್ ಭಾರತಕ್ಕೆ ನೆರೆಯ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಆ ರಾಷ್ಟ್ರದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ಸರಕಾರ ಪ್ರಶ್ನಿಸಬೇಕಾಗಿದೆ.ಜೊತೆಗೆ ಮಧ್ಯಸ್ಥಿಕೆ ವಹಿಸಿ ಅಲ್ಲಿನ ಮುಸ್ಲಿಮರ ಮೇಲೆ ನಡೆಯುತ್ತಿರುವ ನಿಂದನೆ, ಹಲ್ಲೆ ತಡೆಗೆ ಮುಂದಾಗಬೇಕಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.





