ಭೂಮಿಗಳು ಭೂಮಾಲಕರ, ರಿಯಲ್ ಎಸ್ಟೇಟ್, ರಾಜಕಾರಣಿಗಳ ಪಾಲಾಗುತ್ತಿದೆ: ಬಿ.ರುದ್ರಯ್ಯ

ಮೂಡಿಗೆರೆ, ಸೆ.15: ತಾಲೂಕಿನ ಎಲ್ಲಾ ಪ್ರಕಾರದ ಭೂಮಿಗಳು ಬಾರೀ ಭೂಮಾಲೀಕರ ಕಂಪೆನಿ, ರಿಯಲ್ ಎಸ್ಟೇಟ್ ಮಾಫಿಯ ಹಾಗೂ ರಾಜಕಾರಣಿಗಳ ಪಾಲಾಗಿದೆ. ಶೇ.85 ರಷ್ಟು ದುಡಿಯುವ ವರ್ಗದವರು ನಿವೇಶನಕ್ಕಾಗಿ ಅಲೆದು ಅಲೆದು ಸುಸ್ತಾಗಿದ್ದಾರೆ. ಇವರಿಗೆ ನಿವೇಶನ ನೀಡಲು ಜಾಗವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಆರೋಪಿಸಿದರು.
ಅವರು ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಿಪಿಐಎಂಎಲ್, ರೈತ ಸಂಘ ಹಾಗೂ ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ಭೂ ರಹಿತರಿಗೆ ನಿವೇಶನ ಹಾಗೂ ವಸತಿ ರಹಿತರ ಸಮಾವೇಶದಲ್ಲಿ ಮಾತನಾಡಿ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರನ್ನು ಗುಲಾಮರಂತೆ ದುಡಿಸಿಕೊಳ್ಳಲಾಗುತ್ತದೆ. ವಾಸಿಸಲು ಸೂರಿಲ್ಲದೆ ಎಸ್ಟೇಟ್ ಕೂಲಿ ಲೈನ್‍ಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ನಿವೇಶನಕ್ಕಾಗಿ ಹಲವು ಬಾರಿ ಹೋರಾಟ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ನಿವೇಶನದ ಸಮಸ್ಯೆ ಪರಿಹರಿಸಲಿಲ್ಲ ಎಂದು ದೂರಿದರು.
ತಾಲೂಕಿನ ಹಳೆ ಮೂಡಿಗೆರೆ, ಹೆಸಗಲ್, ಚಿನ್ನಿಗ, ದಾರದಹಳ್ಳಿ, ಕೂವೆ, ಕಳಸ ಸೇರಿದಂತೆ ವಿವಿಧ ಗ್ರಾ.ಪಂ. ವ್ಯಪ್ತಿಗಳಲ್ಲಿ ಸಾವಿರಾರು ಮಂದಿ ನಿವೇಶನ ರಹಿತರು ಸೂರಿಗಾಗಿ ದಶಕಗಳಿಂದ ಕಾಯುತ್ತಿದ್ದಾರೆ. ತಾಲೂಕಿನ ಕಂದಾಯ ಭೂಮಿ ಸೇರಿದಂತೆ 42.ಸಾವಿರ ಎಕರೆ ಭೂಮಿ ಒತ್ತುವರಿಯಾಗಿರುವುದು ಕಂಡು ಬಂದಿದೆ. ಆದರೆ ಬಡವರ ಸೂರಿನ ವಿಚಾರ ಬಂದಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಡೀಮ್ಡ್ ಫಾರಸ್ಟ್ ಸಮಸ್ಯೆಯನ್ನು ಮುಂದಿಡುತ್ತಿದ್ದಾರೆ ಎಂದರು.
ಸೂರಿಗಾಗಿ ಹೋರಾಡುತ್ತಿರುವುದು ಸ್ಥಳೀಯರಲ್ಲ, ದಲಿತರಲ್ಲ ಎಂದು ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಾ ನಿವೇಶನಕ್ಕೆ ಮಂಜೂರಾದ ಭೂಮಿಯನ್ನು ಹಂಚದಂತೆ ಅಧಿಕಾರಿಗಳು ನ್ಯಾಯಾಂಗದ ಮೂಲಕ ತಡೆಯೊಡ್ಡುತ್ತಾ ಬಡವರ ಸೂರಿನ ಕನಸಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದರು.
ಹಳೆ ಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂಮಿ ಮಂಜೂರಾತಿ ಪಡೆದು ಆಶ್ರಯ ನಿವೇಶನಕ್ಕಾಗಿ 4.30 ಎಕರೆ ಪೊಲೀಸ್ ಇಲಾಖೆಗೆ 1, ಸಮಾಜ ಕಲ್ಯಾಣ ಇಲಾಖೆಗೆ 1, ಸರಕಾರದ ಇತರೆ ಅಭಿವೃದ್ಧಿಗೆ 1 ಎಕರೆ ನಕಾಶೆ ತಯಾರಿಸಿ ಖಾತೆ ಹೊಂದಿದ್ದರೂ ರಸ್ತೆ ಸಮಸ್ಯೆ ಮುಂದಿಟ್ಟು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೂಡಲೆ ಸರಕಾರ ವಸತಿ ರಹಿತರಿಗೆ ನಿವೇಶನ ಒದಗಿಸಬೇಕು. ಇಲ್ಲವಾದರೆ ತೀವ್ರ ತರದ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಹಳೆ ಮೂಡಿಗೆರೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು.
ಸಮಾವೇಶದಲ್ಲಿ ಸಿಪಿಐಎಂಎಲ್‍ನ ರಾಜ್ಯ ಸಮಿತಿ ಸದಸ್ಯ ಗಂಗಾಧರ್, ಮುಖಂಡರಾದ ಮರಗುಂದ ಪ್ರಸನ್ನ, ರವಿ ದೇವವೃಂದ, ಕೃಷ್ಣಮೂರ್ತಿ, ಶ್ರೀನಿವಾಸ್ ಕಂದೇಗಲ್, ರಾಜರತ್ನಂ, ಗೌಸ್ ಮೊಹಿಯುದ್ದೀನ್, ಲಕ್ಷ್ಮಣ್ ಹಾಂದಿ ಮತ್ತಿತರರು ಉಪಸ್ಥಿತರಿದ್ದರು.







