ಅಹಿಂದ ವರ್ಗಗಳ ಮೇಲೆ ದೌರ್ಜನ್ಯ ನಡೆಸಿ ವಾಮ ಮಾರ್ಗದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ: ಹರಿಪ್ರಸಾದ್

ಮೂಡಿಗೆರೆ, ಸೆ.15: ಅಲ್ಪ ಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ ನಡೆಸಿ, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿಗೆ ವಾಮಾ ಮಾರ್ಗದ ಮೂಲಕ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವುದು ದೇಶದ ಜನತೆಗೆ ದಕ್ಕಿರುವ ದುರಂತ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ರೈತ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಮಾತನಾಡಿದರು.
ಮಹಾತ್ಮಾಗಾಂಧೀಜಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತದಿಂದ ಬಂದ ಕಾಂಗ್ರೆಸ್ ಪಕ್ಷಕ್ಕೆ ಆರ್‍ಎಸ್‍ಎಸ್‍ನ ಕೋಮುವಾದಿ ಸಿದ್ಧಾಂತದಿಂದ ಬಂದಿರುವ ಬಿಜೆಪಿ ಬುದ್ಧಿ ಕಲಿಸಲು ಮುಂದಾಗಿದೆ. ಕೇಂದ್ರ ಸರಕಾರದಲ್ಲಿ ಬಿಜೆಪಿಯ ಭ್ರಷ್ಟಾಚಾರ ಮಿತಿಮೀರಿ ಅಧಿಕಾರದ ಅಮಲು ತಲೆಗೆ ಹತ್ತಿ ಕುಳಿತಿತರುವಾಗ ಕಾಂಗ್ರೆಸ್ ಪಕ್ಷದ ವಿರುದ್ಧ ಸಮರ ಸಾರಲು ಮುಂದಾದರೆ, ಮುಂದಿನ ಚುನಾವಣೆಯಲ್ಲಿ ದೇಶದ ಜನರೆ ಕೋಮುವಾದಿ ಪಕ್ಷಕ್ಕೆ ಬುದ್ಧಿ ಕಲಿಸಿ ಮನೆಗೆ ಕಳುಹಿಸಲಿದ್ದಾರೆಂದು ಖಾರವಾಗಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಠಿ, ರಸ್ತೆ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದೇಶದ ಎಲ್ಲಾ ರಾಜ್ಯಕ್ಕಿಂದ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಸರ್ವೆ ಸಮೀಕ್ಷೆ ಮೂಲಕ ಸಾಬೀತಾಗಿದೆ. ಒಂದು ಸರಕಾರ ರಾಜ್ಯದ ಜನತೆಗೆ ಏನೇನು ಮಾಡಬೇಕು ಅದನ್ನೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿದೆ ಎಂದ ಅವರು, ನರೇಂದ್ರ ಮೋದಿ ಸರಕಾರದಿಂದ ದೇಶದಲ್ಲಿ ನೆಮ್ಮದಿಯಾಗಿರುವವರೆಂದರೆ ಅದು ಅಗರ್ಭ ಶ್ರೀಮಂತ ಕುಳಗಳು ಮಾತ್ರ. ಸಾಮಾನ್ಯ ಜನರನ್ನು ಸಂಪೂರ್ಣ ನಿದ್ದೆಗೆಡಿಸಿ ಸುಲಿಗೆಯಲ್ಲಿ ತೊಡಗಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನೋರಾರು ಸಮಸ್ಯೆಗಳು ಹುಟ್ಟಿಕೊಂಡಿವೆ. ಅವುಗಳನ್ನೆಲ್ಲಾ ಜೀವಂತವಿರಿಸಿ, ವಿದೇಶ ಸುತ್ತುವ ಪ್ರಧಾನಿ ನರೇಂದ್ರ ಮೋದಿ ಅವರು, ವಿದೇಶದಿಂದ ದೊಡ್ಡ ಮೊತ್ತದ ಸಾಲ ಪಡೆದು ಬುಲೆಟ್ ಟ್ರೈನ್ ಬಿಡಲು ಹೊರಟಿರುವುದು ದೇಶವನ್ನು ವಿನಾಶದಂಚಿಗೆ ಕೊಂಡೊಯ್ಯುವ ಅವರ ಕ್ರಮವಾಗಿದೆ ಎಂದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಿಜೆಪಿಯ ಪ್ರಭಲ ವಿರೋಧದ ನಡುವೆಯೂ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರನ್ನು ನೆಮ್ಮದಿಯಾಗಿಡುವಂತೆ ಮಾಡಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಕಾಂಗ್ರೆಸ್ ಭವನದಿಂದ ವಾಧ್ಯದೊಂದಿಗೆ ರೈತಭವನದ ವರೆಗೆ ಮೆರವಣೆಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಕೆಪಿಸಿಸಿ ಉಪಾಧ್ಯಕ್ಷ ಡಾ. ಬಿ.ಎಲ್.ಶಂಕರ್, ಕೆಪಿಸಿಸಿ ಉಪಾಧ್ಯಕ್ಷೆ ಹಾಗೂ ಎಂಎಲ್‍ಸಿ ಡಾ.ಮೋಟಮ್ಮ, ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಗೋಪಾಲ್ ಬಂಡಾರಿ, ನವೀನ್ ಡಿಸೋಜಾ, ಮಾಜಿ ಎಂ.ಎಲ್‍ಸಿ ಗಾಯಿತ್ರಿ ಶಾಂತೇಗೌಡ, ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮಿಗಾ, ಜಿ.ಪಂ. ಸದಸ್ಯ ಪ್ರಭಾಕರ್, ಮುಖಂಡರಾದ ಬಿ.ಎಂ.ಸಂದೀಪ್, ಟಿ.ಡಿ.ರಾಜೇಗೌಡ, ನಯನ ಜಾವರ್, ಎನ್.ಆರ್.ನಾಗರತ್ನ, ಮಾಜಿ. ಜಿ.ಪಂ. ಉಪಾಧ್ಯಕ್ಷೆ ಸವಿತ ರಮೇಶ್, ಪ.ಪಂ. ಅಧ್ಯಕ್ಷೆ ರಮಿಜಾಬಿ, ಬಿ.ಎಸ್.ಜಯರಾಂ, ಟಿ.ಎ.ಮದೀಶ್, ಎಂ.ಎಸ್.ಅನಂತ್ ಮತ್ತಿತರರಿದ್ದರು.







