ಡೆಂಗ್ ರೋಗದ ಕುರಿತು ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಚಾಲನೆ

ದಾವಣಗೆರೆ, ಸೆ.15: ಕೀಟ ಚಿಕ್ಕದಾದರೂ ಕಾಟ ದೊಡ್ಡದು, ನೀರು ನಿಲ್ಲದಂತೆ ನೋಡಿಕೊಳ್ಳಿ, ಡೆಂಗ್ ಜ್ವರ, ಈಡೀಸ್ ಈಜಿಪ್ಟೈ ಸೊಳ್ಳೆಯಿಂದ ಬರುತ್ತದೆ, ನಿಂತ ನೀರು ಸೊಳ್ಳೆಗಳ ತವರೂರು ಎಂದು ಡೆಂಗ್ ಜ್ವರ ಕುರಿತ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ನಗರದಲ್ಲಿ ಇಂದು ಸಂಚರಿಸಿತು.
ಡೆಂಗ್ ವಿರೋಧಿ ಮಾಸಾಚರಣೆ ಅಂಗವಾಗಿ ನಗರದ ಎಸ್‍ಎಂಕೆ ನಗರದ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ದುರ್ಗಾಂಬಿಕಾ ಶಾಲಾ ಆವರಣದಲ್ಲಿ ಡೆಂಗ್ಯು ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಬೆಳಗ್ಗೆ ಏರ್ಪಡಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ದುರ್ಗಾಂಬಿಕಾ ಪ್ರೌಢಶಾಲಾ ಮಕ್ಕಳು, ನಗರ ಆರೋಗ್ಯ ಸ್ವಯಂ ಸೇವಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಜಾಥಾ ನಿರತರು ಜಾಲಿನಗರ ಸುತ್ತಮುತ್ತ ಪ್ರದೇಶದಲ್ಲಿ ಸಂಚರಿಸಿ ಅರಿವು ಮೂಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಬ ಮಕ್ಕಳನ್ನುದ್ದೇಶಿಸಿ ಮಾತನಾಡಿ ಡೆಂಗ್ ರೋಗ ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಬರುತ್ತದೆ. ಈ ಸೊಳ್ಳೆ ಸ್ವಚ್ಛ ನೀರಿನಲ್ಲೇ ತನ್ನ ಸಂತಾನಾಭಿವೃದ್ಧಿ ಮಾಡುತ್ತದೆ. ಸೊಳ್ಳೆಗಳು ನೀರು ಶೇಖರಿಸಿ ಇಡುವ ಬ್ಯಾರಲ್ ತೊಟ್ಟಿ, ಕಲ್ಲುಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಜ್ಯೂಸ್ ಬಾಟಲ್, ತೆಂಗಿನ ಚಿಪ್ಪು, ಬ್ಯಾರಲ್, ಮಣ್ಣಿನ ಮಡಿಕೆ, ಟೈರುಗಳು, ಉಪಯೋಗಿಸದ ಒರಳುಕಲ್ಲು ಇತ್ಯಾದಿಗಳೆಡೆ ಶೇಖರವಾದ ನೀರಲ್ಲಿ ಉತ್ಪತ್ತಿಯಾಗುವುದರಿಂದ ತೊಟ್ಟಿ, ಡ್ರಂ, ಬ್ಯಾರೆಲ್ ಇತ್ಯಾದಿಗಳನ್ನು ವಾರಕ್ಕೆರಡು ಬಾರಿ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಪುನಃ ಉಪಯೋಗಿಸಬೇಕು. ಮಕ್ಕಳು ಲಾರ್ವಾವನ್ನು ಸುಲಭವಾಗಿ ಗುರುತಿಸುತ್ತಿದ್ದಾರೆ. ಅವರು ಡೆಂಗ್ ಸೇರಿದಂತೆ ಆರೋಗ್ಯದ ಕುರಿತು ಅರಿವು ಮೂಡಿಸುವಲ್ಲಿ ಉತ್ತಮ ಪಾತ್ರ ವಹಿಸುತ್ತಾರೆಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಆಯುಷ್ ಅಧಿಕಾರಿ ಡಾ. ಸಿದ್ದೇಶ್, ಆರ್‍ಸಿಹೆಚ್‍ಒ ಡಾ. ಶಿವಕುಮಾರ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಗಳಾ, ಶಾಲಾ ಮುಖ್ಯೋಪಾಧ್ಯಾಯರು, ನಗರ ಆರೋಗ್ಯ ಸ್ವಯಂ ಸೇವಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.







