ಫಿಫಾ ಅಂಡರ್ -17 ವಿಶ್ವಕಪ್‌ನ ಫೈನಲ್ ಗೆ ಸಾಲ್ಟ್ ಲೇಕ್ ಸ್ಟೇಡಿಯಂ ಸಜ್ಜು

ಹೊಸದಿಲ್ಲಿ, ಸೆ.15: ಹದಿನೇಳನೆ ಆವೃತ್ತಿಯ ಫಿಫಾ ಅಂಡರ್ -17 ವಿಶ್ವಕಪ್‌ನ ಫೈನಲ್ ನಡೆಯಲಿರುವ ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣ ನವೀಕೃತಗೊಂಡು ಸುಂದರವಾಗಿ ಕಂಗೊಳಿಸುತ್ತಿದ್ದು, ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಅಂಡರ್ -17 ಫಿಫಾ ವಿಶ್ವಕಪ್‌ನ ಫೈನಲ್‌ಗೆ 7 ವಾರಗಳು ಬಾಕಿ ಉಳಿದಿವೆ.
33 ವರ್ಷಗಳಷ್ಟು ಹಳೆಯದಾದ ಸಾಲ್ಟ್‌ಲೇಕ್ ಕ್ರೀಡಾಂಗಣವನ್ನು ನವೀಕರಣಗೊಳಿಸಲು ಪಶ್ಚಿಮ ಬಂಗಾಳ ಸರಕಾರ 100 ಕೋಟಿ ರೂ.ಒದಗಿಸಿದೆ.ಇದೀಗ ಸಾಲ್ಟ್‌ಲೇಕ್ ಕ್ರೀಡಾಂಗಣ ವಿಶ್ವದ ಗಮನ ಸೆಳೆದಿದೆ.
ಭಾರತದಲ್ಲಿ ಮೊದಲ ಬಾರಿ ನಡೆಯಲಿರುವ ಅಂಡರ್ -17 ವಿಶ್ವಕಪ್‌ಗೆ ಅಕ್ಟೋಬರ್ 6ರಂದು ಚಾಲನೆ ದೊರೆಯಲಿದೆ. ಜಗತ್ತಿನ ದೊಡ್ಡ ಕ್ರೀಡಾಂಗಣಗಳ ಸಾಲಿಗೆ ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣ ಸೇರಿಕೊಂಡಿದೆ. ಇದೊಂದು ಅಮೂಲ್ಯವಾದ ರತ್ನವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
‘‘ ಸಾಲ್ಟ್‌ಲೇಕ್ ಕ್ರೀಡಾಂಗಣ ಸುಂದರವಾಗಿ ನವೀಕರಣಗೊಂಡಿದೆ. ವಿಶ್ವಕಪ್ ಫೈನಲ್‌ಗೆ ತಯಾರಾಗಿದೆ’’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಮೆಜೆಸ್ಟಿಕ್ ಸಾಲ್ಟ್ ಲೇಕ್ ಸ್ಟೇಡಿಯಂ ಏಷ್ಯಾದ ದೊಡ್ಡ ಕ್ರೀಡಾಂಗಣಗಳ ಪೈಕಿ 2ನೆ ಕ್ರೀಡಾಂಗಣವಾಗಿದೆ.
ಭಾರತದ ಅತೀ ದೊಡ್ಡ ಫುಟ್ಬಾಲ್ ಕ್ರೀಡಾಂಗಣವಾಗಿರುವ ಸಾಲ್ಟ್ ಲೇಕ್ ನಲ್ಲಿ ಈಗಿರುವ ಆಸನಗಳ ಸಾಮರ್ಥ್ಯ 66, 678. ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿ ಸುಮಾರು 1,20,000 ಪ್ರೇಕ್ಷಕರು ಪಾಲ್ಗೊಂಡಿರುವುದು ಒಂದು ಸಾರ್ವಕಾಲಿಕ ದಾಖಲೆಯಾಗಿತ್ತು.







