ಬಾಯಿ ಕ್ಯಾನ್ಸರ್ನ ಬಗ್ಗೆ ನಿಮಗೆಷ್ಟು ಗೊತ್ತು....?
ಓರಲ್ ಕ್ಯಾನ್ಸರ್ ಅಥವಾ ಬಾಯಿ ಕ್ಯಾನ್ರ್ ಬಾಯಿ ಮತ್ತು ಗಂಟಲಿನಲ್ಲಿ ಹುಟ್ಟಿಕೊ ಳ್ಳುವ ಮಹಾವ್ಯಾಧಿಯಾಗಿದ್ದು, ಭಾರತದಲ್ಲಿ ಪ್ರತಿ ವರ್ಷ ದಾಖಲಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಇದರ ಪಾಲು ಶೇ.40ರಷ್ಟಿದೆ.
ವಿಶ್ವಾದ್ಯಂತ ತಂಬಾಕು ಮತ್ತು ಅದರ ಉತ್ಪನ್ನಗಳು ಬಾಯಿ ಕ್ಯಾನ್ಸರ್ಗೆ ನಂ.1 ಕಾರಣ ಎನ್ನುವುದನ್ನು ನೂರಾರು ಅಧ್ಯಯನಗಳು ನಿಸ್ಸಂಶಯವಾಗಿ ಸಾಬೀತುಗೊಳಿಸಿವೆ. ಧೂಮ್ರಪಾನ ಕೊಂಚಮಟ್ಟಿಗೆ ಬಾಯಿಕ್ಯಾನ್ಸರ್ಗೆ ಕಾರಣವಾಗುತ್ತದೆಯಾದರೂ, ಗುಟ್ಕಾದಂತಹ ಜಗಿಯುವ ತಂಬಾಕು, ಹೊಗೆಸೊಪ್ಪು ಸಹಿತ ಎಲೆಅಡಿಕೆ ತಿನ್ನುವುದು ಮುಖ್ಯ ಕಾರಣಗಳಾಗಿವೆ.
ಪ್ರತಿದಿನ ಮಸಾಲೆಭರಿತ ಆಹಾರ ಸೇವನೆ, ಅಲ್ಕೋಹಾಲ್ ಒಳಗೊಂಡಿರುವ ಮೌತ್ವಾಷ್ಗಳ ಬಳಕೆ, ಸೂರ್ಯನ ಅಲ್ಟ್ರಾವಯೊಲೆಟ್ ಕಿರಣಗಳಿಗೆ ಮುಖ ಮತ್ತು ತುಟಿಗಳನ್ನು ಅತಿಯಾಗಿ ಒಡ್ಡುವಿಕೆ, ಚರ್ಮದಿಂದ ಚರ್ಮಕ್ಕೆ ಮನುಷ್ಯರಲ್ಲಿ ಹರಡುವ ಪಾಪಿಲೋಮಾ ವೈರಸ್ ಮತ್ತು ಬಾಯಿ ಕ್ಯಾನ್ಸರ್ನ ಕುಟುಂಬದ ಇತಿಹಾಸ ಇವೂ ಈ ಮಾರಣಾಂತಿಕ ಕಾಯಿಲೆಗೆ ಕಾರಣಗಳಾಗಿವೆ.
ಬಾಯಿ ಕ್ಯಾನ್ಸರ್ನ ಲಕ್ಷಣಗಳು
ಬಾಯಿಯಲ್ಲಿ ಬಿಳಿ ಮತ್ತು ಕೆಂಪು ಕಲೆಗಳು:
ಓರಲ್ ಕ್ಯಾನ್ಸರ್ ಬಾಯಿ ಮತ್ತು ಗಂಟಲಿನಲ್ಲಿ ಬೆಳವಣಿಗೆ ಹೊಂದಲು ಸಮಯವನ್ನು ತೆಗೆದುಕೊಳ್ಳುತ್ತದೆ. ಬಾಯಿಯಲ್ಲಿ ಬಿಳಿ,ಕೆಂಪು ಅಥವಾ ಮಿಶ್ರಬಣ್ಣದ ಕಲೆಗಳು ಕಾಣಿಸಿಕೊಳ್ಳುವುದು ಇದರ ಅತ್ಯಂತ ಆರಂಭಿಕ ಲಕ್ಷಣಗಳಲ್ಲೊಂದಾಗಿದೆ. ಬಿಳಿ ಕಲೆಗಳನ್ನು ಲ್ಯುಕೊಪ್ಲಾಕಿಯಾ, ಕೆಂಪು ಕಲೆಗಳನ್ನು ಎರಿತ್ರೋಪ್ಲಾಕಿಯಾ ಹಾಗೂ ಬಿಳಿ ಮತ್ತು ಕೆಂಪು ಮಿಶ್ರಿತ ಕಲೆಗಳನ್ನು ಎರಿತ್ರೊ ಲ್ಯುಕೊಪ್ಲಾಕಿಯಾ ಎಂದು ಕರೆಯಲಾಗುತ್ತದೆ. ಒದ್ದೆಬಟ್ಟೆಯಿಂದ ಈ ಕಲೆಗಳನ್ನು ಒರೆಸಿ ಸ್ವಚ್ಛಗೊಳಿಸಲು ಪ್ರಯತ್ನಿಸುವ ಮೂಲಕ ಇವುಗಳನ್ನು ಗುರುತಿಸಬಹುದಾಗಿದೆ. ಕಲೆಗಳು ಸುಲಭವಾಗಿ ತೊಲಗಿದರೆ ಅದು ಬಾಯಿ ಕ್ಯಾನ್ಸರ್ ಅಲ್ಲ, ಕ್ಯಾಂಡಿಡಿಯಾಸಿಸ್ ಅಥವಾ ಬಾಯಿಯಲ್ಲಿ ಬೂಷ್ಟಿನಿಂದಾದ ಸೋಂಕು ಆಗಿದೆ ಎಂದು ತಿಳಿದುಕೊಳ್ಳಬಹುದು. ಆದರೆ ಒರೆಸಿದರೂ ಈ ಕಲೆಗಳು ಹೋಗದಿದ್ದರೆ ತಕ್ಷಣವೇ ಓರಲ್ ಸರ್ಜನ್ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು.
ಗುಣವಾಗದ ಹುಣ್ಣುಗಳು: ಬಾಯಿ ಮತ್ತು ತುಟಿಗಳಲ್ಲಿ ಕಾಣಿಸಿಕೊಳ್ಳುವ ಹುಣ್ಣುಗಳು ಎರಡು ತಿಂಗಳುಗಳಾದರೂ ಗುಣವಾಗುತ್ತಿಲ್ಲ ಎಂದಾದರೆ ಅದು ಬಾಯಿ ಕ್ಯಾನ್ಸರ್ನ ಪ್ರಮುಖ ಲಕ್ಷಣವಾಗಿದೆ.
ಬಾಯಿಯೊಳಗೆ ಬೆಳೆಯುತ್ತಿರುವ ಗೆಡ್ಡೆ
ಬಾಯಿ ಕ್ಯಾನ್ಸರ್ ಸಾಮಾನ್ಯವಾಗಿ ಕೆನ್ನೆಗಳ ಬಳಿ ,ಬಾಯಿಯ ಹಿಂಬದಿಯ ಬಳಿ ಅಥವಾ ನಾಲಿಗೆಯಲ್ಲಿ ಮಾಂಸದ ಗಂಟುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ತುಟುಗಳು, ವಸಡುಗಳು, ಬಾಯಿಯ ಅಂಗಳ ಸೇರಿದಂತೆ ಬಾಯಿಯ ಯಾವುದೇ ಭಾಗದಲ್ಲಿಯೂ ಕ್ಯಾನ್ಸರ್ ಗಂಟುಗಳು ಕಾಣಿಸಿಕೊಳ್ಳಬಹುದು. ಎರಡು ತಿಂಗಳಿಗೂ ಅಧಿಕ ಸಮಯದಿಂದ ಬಾಯಿಯೊಳಗೆ ಇಂತಹ ಗಂಟು ಬೆಳೆಯುತ್ತಿದ್ದರೆ ತಕ್ಷಣ ವೈದ್ಯರಿಗೆ ತೋರಿಸಬೇಕು. ಇಂತಹ ಗೆಡ್ಡೆಯನ್ನು ಮುಟ್ಟಿದಾಗ ರಕ್ತ ಒಸರುತ್ತಿದ್ದರೆ ಅದು ತೀರ ಕಳವಳಕಾರಿ ವಿಷಯವಾಗಿದೆ.
ಆಹಾರ ನುಂಗುವುದರಲ್ಲಿ ತೊಂದರೆ
ಕೆಲವೊಮ್ಮೆ ಒಂದೇ ಬಾರಿಗೆ ದೊಡ್ಡ ತುತ್ತನ್ನು ಬಾಯಿಗೆ ಹಾಕಿಕೊಂಡರೆ ನುಂಗಲು ಕಷ್ಟವಾಗುತ್ತದೆ. ಇದು ಸಾಮಾನ್ಯ ಮತ್ತು ಕ್ಯಾನ್ಸರ್ ಎಂದು ಹೆದರಬೇಕಾಗಿಲ್ಲ. ಆದರೆ ದಿನವೂ ಆಹಾರ ಮತ್ತು ಪಾನೀಯ ಸೇವನೆ ಕಷ್ಟವಾಗುತ್ತಿದೆ ಎಂದಾದರೆ ಅದು ಗಂಟಲು ಕ್ಯಾನ್ಸರ್ನ ಲಕ್ಷಣವಾಗಿದೆ.
ಕುತ್ತಿಗೆಯಲ್ಲಿ ಗಂಟು
ಬಾಯಿಯೊಳಗಿನ ಎಲ್ಲ ಭಾಗಗಳಿಂದ ಸಂಗ್ರಹವಾಗುವ ದುಗ್ಧರಸ(ರಕ್ತದ ಒಂದು ಭಾಗ)ವು ಗಲ್ಲದ ಕೆಳಗೆ ಮತ್ತು ಕುತ್ತಿಗೆಯ ಎರಡೂ ಕಡೆಗಳಲ್ಲಿರುವ ದುಗ್ಧಗೆಡ್ಡೆಗಳಿಗೆ ಸಾಗುತ್ತದೆ. ಬಾಯಿ ಕ್ಯಾನ್ಸರ್ನ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಕೋಶಗಳು ದುಗ್ಧರಸವನ್ನು ಸೇರಿಕೊಂಡು ಈ ದುಗ್ಧಗೆಡ್ಡೆಗಳನ್ನು ತಲುಪಿ ಅಲ್ಲಿ ಬೆಳೆಯಲಾರಂಭಿಸುತ್ತವೆ. ಹೀಗಾಗಿ ನಿಮ್ಮ ಕುತ್ತಿಗೆಯ ಬದಿಯಲ್ಲಿ ಅಥವಾ ಗಲ್ಲದ ಕೆಳಗೆ ಗಟ್ಟಿಯಾದ ಗೆಡ್ಡೆ ಕಾಣಿಸಿ ಕೊಂಡರೆ ಅದೂ ಬಾಯಿ ಕ್ಯಾನ್ಸರ್ನ ಪ್ರಮುಖ ಲಕ್ಷಣವಾಗಿದೆ.
ಸಡಿಲಗೊಂಡ ಹಲ್ಲುಗಳು
ಕ್ಯಾನ್ಸರ್ ನಿಮ್ಮ ವಸಡುಗಳಿಗೆ ತಗುಲಿದ್ದರೆ ಮಾತ್ರ ಈ ಲಕ್ಷಣ ಕಂಡು ಬರುತ್ತದೆ. ಕ್ಯಾನ್ಸರ್ನ ಬೆಳವಣಿಗೆಯು ವಸಡಿನ ಮೂಳೆಗಳ ನೈಸರ್ಗಿಕ ಸ್ವರೂಪವನ್ನು ನಾಶಗೊಳಿ ಸುತ್ತದೆ ಮತ್ತು ಇದೇ ಕಾರಣದಿಂದ ಹಲ್ಲುಗಳು ಸಡಿಲಗೊಳ್ಳುತ್ತವೆ.
ತ್ವರಿತವಾಗಿ ತೂಕ ಕಳೆದುಕೊಳ್ಳುವಿಕೆ
ಹಸಿವು ಇಲ್ಲದಿರುವಿಕೆ ನಿಮ್ಮ ಶರೀರದ ಯಾವುದೇ ಭಾಗದಲ್ಲಿ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳಲ್ಲೊಂದಾಗಿದೆ. ಇದರಿಂದ ಪೋಷಕಾಂಶಗಳ ಕೊರತೆಯುಂಟಾಗುತ್ತದೆ ಮತ್ತು ಅತ್ಯಂತ ಅಲ್ಪ ಅವಧಿಯಲ್ಲಿ ಶರೀರವು ತೂಕವನ್ನು ಕಳೆದುಕೊಳ್ಳುತ್ತದೆ.
ದೀರ್ಘಕಾಲದಿಂದ ಕಿವಿಯಲ್ಲಿ ನೋವು
ಬಾಯಿಯಲ್ಲಿ ಕ್ಯಾನ್ಸರ್ ಬೆಳವಣಿಗೆಯು ನರಗಳು ಸೇರಿದಂತೆ ನಮ್ಮ ಶರೀರದ ಆಳದವರೆಗೂ ದಾಳಿ ನಡೆಸುತ್ತದೆ ಮತ್ತು ಇದೇ ಕಾರಣದಿಂದ ದೀರ್ಘಕಾಲ ಕಿವಿಯಲ್ಲಿ ನೋವು ಆಗುತ್ತಿರುತ್ತದೆ.
ಕರ್ಕಶತೆ ಅಥವಾ ಧ್ವನಿಯಲ್ಲಿ ದಿಢೀರ್ ಬದಲಾವಣೆ
ಇದೂ ನರಗಳು ಕ್ಯಾನ್ಸರ್ ಕೋಶಗಳ ಆಕ್ರಮಣಕ್ಕೆ ತುತ್ತಾಗಿವೆ ಎನ್ನುವುದನ್ನು ಸೂಚಿಸುತ್ತದೆ. ಧ್ವನಿಯು ದಿಢೀರ್ ಆಗಿ ಕರ್ಕಶಗೊಳ್ಳುತ್ತದೆ. ಈ ಲಕ್ಷಣ ಸಾಮಾನ್ಯವಾಗಿ ಗಂಟಲು ಕ್ಯಾನ್ಸರ್ನ ಮುಂದುವರಿದ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ.
ಓರಲ್ ಕ್ಯಾನ್ಸರ್ ನಾಲ್ಕು ಹಂತಗಳಲ್ಲಿ ವ್ಯಾಪಿಸುತ್ತದೆ. ಬಾಯಿ ಕ್ಯಾನ್ಸರ್ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆಯಾದರೂ ಕ್ಯಾನ್ಸರ್ನ ಲಕ್ಷಣಗಳ ಕುರಿತು ಮಾಹಿತಿಗಳ ಕೊರತೆ ಮತ್ತು ವೈದ್ಯರಿಗೆ ತೋರಿಸಲು ಹಿಂಜರಿಕೆ ಇವುಗಳಿಂದಾಗಿ ಹೆಚ್ಚಿನ ಪ್ರಕರಣಗಳು ಅವು ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಪತ್ತೆಯಾಗುತ್ತವೆ. ಪ್ರಾರಂಭಿಕ ಲಕ್ಷಣಗಳನ್ನು ತಿಳಿದುಕೊಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಶೇ.81ರಷ್ಟು ಪ್ರಕರಣಗಳಲ್ಲಿ ಈ ರೋಗವನ್ನು ಗುಣಪಡಿಸಬಹುದಾಗಿದೆ. ಬಾಯಿ ಕ್ಯಾನ್ಸರ್ಗೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿರುವುದರಿಂದ ಅದು ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ತುಂಬ ಕಡಿಮೆಯಾಗಿದೆ. ಕ್ಯಾನ್ಸರ್ ಯಾವ ಹಂತದಲ್ಲಿದೆ ಮತ್ತು ಗಂಟಲು ಅಥವಾ ಬಾಯಿಯ ಯಾವ ಭಾಗವನ್ನು ಆಕ್ರಮಿಸಿಕೊಂಡಿದೆ ಎನ್ನುವುದನ್ನು ಅವಲಂಬಿಸಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಕಿಮೊಥೆರಪಿ ಮತ್ತು ಟಾರ್ಗೆಟ್ ಥೆರಪಿ ಮೂಲಕ ಗುಣಪಡಿಸಲಾಗುತ್ತದೆ.