18.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು, ಸೆ. 16: ನಗರದ ಅಡುಮರೋಳಿ ಸಮೀಪದ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ಕಳ್ಳರು ಮನೆಯಲ್ಲಿದ್ದ 99 ಪವನ್ ಚಿನ್ನ ಮತ್ತು 13 ಸಾವಿರ ನಗದು ಕಳವು ಮಾಡಿದ್ದಾರೆ. ಕಳವಾಗಿರುವ ಚಿನ್ನದ ಮೌಲ್ಯ 18,29,980 ರೂ. ಎಂದು ಅಂದಾಜಿಸಲಾಗಿದೆ.
ಅಡುಮರೋಳಿ ಮಾರಿಗುಡಿ ಸಮೀಪದ ನಿವಾಸಿ ಶೇಖರ್ ಕುಂದರ್ (60) ಎಂಬವರ ಮನೆಯಿಂದ ಈ ಕಳವು ನಡೆದಿದೆ.
ಶನಿವಾರ ಸುಮಾರು 10 ಗಂಟೆಯಿಂದ ಮಧ್ಯಾಹ್ನ 1.20ರ ವೇಳೆಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನ ವೇಳೆಗೆ ಕಳವು ಪ್ರಕರಣ ಬೆಳಕಿಗೆ ಬಂದಿಗೆ. ನಗರದ ಶೋ ರೂಂವೊಂದರಲ್ಲಿ ಮೆಕ್ಯಾನಿಕಲ್ ಕೆಲಸಕ್ಕೆಂದು ಬೆಳಗ್ಗೆ 9.10ರ ಶೇಖರ್ ಮನೆಯಿಂದ ತೆರಳಿದ್ದರು. ಅವರ ಪತ್ನಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು. ಇವರು ಕೂಡ ಬೆಳಗ್ಗೆ 9.50ರ ವೇಳೆಗೆ ಮನೆಯಿಂದ ಕಚೇರಿಗೆ ತೆರಳಿದ್ದರು ಎನ್ನಲಾಗಿದೆ.
ಶೇಖರ್ ಅವರು ಊಟಕ್ಕೆಂದು ಮಧ್ಯಾಹ್ನ 1.20ರ ಹೊತ್ತಿಗೆ ಮನೆಗೆ ಮರಳಿದ್ದಾರೆ. ಬಾಗಿಲು ತೆಗೆದು ಒಳಪ್ರವೇಶಿಸಿದಾಗ ಮನೆಯ ಕೊಠಡಿಯಲ್ಲಿ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಗೋದ್ರೆಜ್ ಕಪಾಟಿನ ಬಾಗಿಲು ತೆರೆದಿದ್ದು, ಲಾಕರ್ ಕೂಡ ತೆರೆದಿತ್ತು. ಕೂಡಲೇ ಶೇಖರ್ ಅವರು ಪತ್ನಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಪತ್ನಿ ಮನೆಗೆ ಬಂದು ನೋಡುವಾಗ ಕಪಾಟಿನಲ್ಲಿದ್ದ ಒಟ್ಟು 99 ಪವನ್ ಚಿನ್ನಾಭರಣ ಮತ್ತು 13 ಸಾವಿರ ರೂ. ಕಳವಾಗಿರುವುದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಕಂಕನಾಡಿ ನಗರ ಠಾಣಾ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







