ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಭಿನ್ನಾಭಿಪ್ರಾಯವಿಲ್ಲ: ಕೆ.ಸಿ.ವೇಣುಗೋಪಾಲ್

ಬೆಂಗಳೂರು, ಸೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವೆ ಯಾವುದೇ ಭಿನ್ನಮತ, ಅಸಮಾಧಾನವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ನಾಯಕರ ನಡುವೆ ಉತ್ತಮ ಸಂಬಂಧವಿದೆ. ಇಬ್ಬರು ಸೇರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವೆ ಅಸಮಾಧಾನವಿದೆ ಅನ್ನೋದೆಲ್ಲಾ ಸುಳ್ಳು. ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಉತ್ತಮವಾಗಿದೆ. ಕಾನೂನು ಸುವವ್ಯಸ್ಥೆಯನ್ನು ಹಾಳು ಮಾಡುವವರು ಬಿಜೆಪಿಯವರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯ ಸಂಸ್ಕಾರಕ್ಕೂ ಬಾರದೆ, ಅವರಿಗೆ ಅಂತಿಮ ಗೌರವ ಸಲ್ಲಿಸದವರು ಬಿಜೆಪಿಯವರು. ಈ ಹತ್ಯೆ ಹಿಂದೆ ಯಾರಿದ್ದಾರೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಗೌರಿ ಲಂಕೇಶ್ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಮುಖ್ಯಮಂತ್ರಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಅಸಮಾಧಾನವಿಲ್ಲ. ಒಂದೆರೆಡು ದಿನಗಳ ಹಿಂದೆಯಷ್ಟೇ ನಾನು ಮುಖ್ಯಮಂತ್ರಿ ಮನೆಗೆ ಹೋಗಿ ಗಂಟೆಗಳ ಕಾಲ ಪಕ್ಷ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.
ಮುಖ್ಯಮಂತ್ರಿ ನಮ್ಮ ಮನೆಗೆ ಬರದೇ ಇರಬಹುದು. ಆದರೆ, ನಾನು ಅವರ ಮನೆಗೆ ಹೋಗಿ ಮಾತನಾಡಿದ್ದೇನೆ. ಇಬ್ಬರು ಸೇರಿಯೆ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಸರ್ವ ಸನ್ನದ್ಧಗೊಳಿಸುತ್ತಿದ್ದೇವೆ. ನಮ್ಮಿಬ್ಬರ ನಡುವೆ ಭಿನ್ನಮತವಿದೆ ಅನ್ನೋದೆಲ್ಲ ಸುಳ್ಳು ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಲಾಯಿತು. ಆದುದರಿಂದ, ನಾನು ಬರಲು ಸಾಧ್ಯವಿಲ್ಲವೆಂದು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ತಿಳಿಸಿದ್ದೆ. ಇದರಲ್ಲಿ ಯಾವುದೇ ಅಸಮಾಧಾನವಿಲ್ಲ. ಮೊದಲು ನಿಗದಿಯಾಗಿದ್ದು ಸರಕಾರಿ ಕಾರ್ಯಕ್ರಮ. ಆನಂತರ ಪಕ್ಷದ ಕಾರ್ಯಕ್ರಮವನ್ನು ಅಲ್ಲಿನ ಜಿಲ್ಲಾ ಮುಖಂಡರು ಆಯೋಜಿಸಿದರು. ಕೊನೆ ಕ್ಷಣದಲ್ಲಿ ಆಹ್ವಾನ ನೀಡಿದ್ದರಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ತೆರಳಿದ್ದಾರೆ. ಅಲ್ಲಿಗೆ ಹೋದ ನಂತರ ಹೈಕಮಾಂಡ್ ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ನಾನು ಒಬ್ಬನೆ ಸಾಕಷ್ಟು ಬಾರಿ ಹೊಸದಿಲ್ಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದೇನೆ. ತಿಪಟೂರು ಶಾಸಕ ಕೆ.ಷಡಕ್ಷರಿಗೆ ಸಚಿವ ಸ್ಥಾನ ಕೈ ತಪ್ಪಿದ್ದ ವಿಚಾರದಲ್ಲೂ ನನಗೆ ಬೇಸರವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ಪ್ರಕಾರ ಜಾರ್ಜ್ ನಡೆದುಕೊಳ್ಳುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಚುನಾವಣಾ ದೃಷ್ಟಿಯಿಂದ ಬಿಜೆಪಿ ಹೋರಾಟ ಮಾಡುತ್ತಿದೆ. ಅದರ ಹಿಂದೆ ರಾಜಕೀಯ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ ಎಂದರು.
ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ನ್ನು ಆಹ್ವಾನಿಸಲಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಆಗಮನದ ಹಿನ್ನೆಲೆಯಲ್ಲಿ ಕೆಲವು ಸಿದ್ಧತೆಗಳನ್ನು ಮಾಡಬೇಕಿದ್ದರಿಂದ ಅವರು ಬಂದಿರಲಿಲ್ಲ.
-ಲಕ್ಷ್ಮೀ ಹೆಬ್ಬಾಳ್ಕರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ







