ಸೆ.22 ರಿಂದ ನವರಾತ್ರಿ ಉತ್ಸವ
ಬೆಂಗಳೂರು, ಸೆ. 16: ದಸರಾ ಹಬ್ಬದ ಅಂಗವಾಗಿ ಪ್ರಸಕ್ತ ನಂದಿನಿ ಬಡಾವಣೆ ನವರಾತ್ರಿ ಮತ್ತು ನಂದಿನಿ ಉತ್ಸವ ಸಮಿತಿ ವತಿಯಿಂದ ಸೆ.22ರಿಂದ 30ರವರೆಗೆ ವಿವಿಧ ಧಾರ್ಮಿಕ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಉತ್ಸವದ ಮೂಲಕ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಭಾಗದ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಸೇರಿಸಿ ನಾಡಿನ ಸೊಗಡನ್ನು ಜನರಿಗೆ ಪ್ರದರ್ಶಿಸುವುದು ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಕಲೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಒಂದು ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿ, ಮಜಾಭಾರತ, ಮಿಮಿಕ್ರಿ ದಯಾನಂದ್ ಹಾಗೂ ಸುಧಾ ಬರಗೂರು ಅವರ ಹಾಸ್ಯ ಕಾರ್ಯಕ್ರಮ ಹಾಗೂ ದೇಹದಾರ್ಢ್ಯ ಪ್ರದರ್ಶನ, ಯಕ್ಷಗಾನ ಹಮ್ಮಿಕೊಳ್ಳಲಾಗಿದೆ. ಜೊತೆಗೆ, ಭಾಷಣ, ಕ್ಲಾಸಿಕಲ್ ಸಾಂಗ್ಸ್, ಸ್ಕಿಟ್, ಫೋಕ್ ಡ್ಯಾನ್ಸ್, ಭರತನಾಟ್ಯ, ಫ್ಯಾಷನ್ ಷೋ ಸೇರಿದಂತೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಸ್ಪರ್ಧೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕರು, ಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಇ.ಮಂಜುನಾಥ್, ಶರವಣಗೆರೆ, ಧನಂಜಯ ಉಪಸ್ಥಿತರಿದ್ದರು.







