ನದಿ ಜೋಡಣೆ ರಸ್ತೆ ಜೋಡಣೆಯಂತಲ್ಲ: ಜಲಜಾಗೃತಿ ಕಾರ್ಯಕರ್ತ ರಾಜೇಂದ್ರ ಸಿಂಗ್ ಎಚ್ಚರಿಕೆ

ಪುಣೆ, ಸೆ.16: ನದಿ ಜೋಡಣೆ ಯೋಜನೆ ಹಣಮಾಡುವ ದಂಧೆಯಾಗಿದೆ ಎಂದು ಟೀಕಿಸಿರುವ ಜಲ ಜಾಗೃತಿ ಕಾರ್ಯಕರ್ತ ರಾಜೇಂದ್ರ ಸಿಂಗ್ , ನದಿ ಜೋಡಣೆ ಎಂಬುದು ರಸ್ತೆ ಜೋಡಣೆಯಂತಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನದಿ ಜೋಡಣೆ ಕಾರ್ಯದಿಂದ ನದಿ-ಪರಿಸರ ವ್ಯವಸ್ಥೆಗೆ ಸರಿಪಡಿಸಲಾಗದ ಹಾನಿ ಉಂಟಾಗುವ ಸಾಧ್ಯತೆಯಿದೆ. ರಸ್ತೆಗಳನ್ನು ಜೋಡಿಸುವುದು ಅಷ್ಟೊಂದು ತ್ರಾಸದಾಯಕವಲ್ಲ. ಆದರೆ ಎರಡು ನದಿಗಳ ಜೋಡಣೆ ಎಂಬುದು ಅಷ್ಟೊಂದು ಸುಲಭವಲ್ಲ. ನದಿಗಳು ತಮ್ಮದೇ ಆದ ಪರಿಸರ ವಿಜ್ಞಾನ ವ್ಯವಸ್ಥೆ ಕಾಯ್ದುಕೊಂಡಿರುತ್ತವೆ. ಆದ್ದರಿಂದ ನದಿ ಜೋಡಣೆಗೆ ಮುಂದಾದರೆ ಪ್ರಾಕೃತಿಕ ಪರಿಸರ ವ್ಯವಸ್ಥೆ ಸಂಪೂರ್ಣ ನಾಶವಾಗುತ್ತದೆ ಎಂದವರು ಹೇಳಿದರು. ಪುಣೆಯ ಸಿಂಬಿಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಜಿಯೊಇನ್‌ಫಾರ್ಮೆಟಿಕ್ಸ್‌ನಲ್ಲಿ ಆಯೋಜಿಸಲಾಗಿದ್ದ ವಿಚಾರಸಂಕಿರಣದಲ್ಲಿ ‘ಜಲಾನಯನ ಭೂಮಿ ಮತ್ತು ಅದರ ಅಭಿವೃದ್ಧಿ’ ಎಂಬ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಟ್ಲೇಜ್ ಮತ್ತು ಯಮುನಾ ನದಿಗಳನ್ನು ಜೋಡಿಸಲು ನಡೆಸಿದ ಈ ಹಿಂದಿನ ಯತ್ನವೂ ಸೇರಿದಂತೆ ಹಲವು ವಿಫಲ ಯತ್ನಗಳ ಬಗ್ಗೆ ತಿಳಿದಿದ್ದರೂ ನದಿ ಜೋಡಣೆಗೆ ಭಾರೀ ಮೊತ್ತದ ನಿಧಿಯನ್ನು ಕಾಯ್ದಿರಿಸಿರುವ ಬಗ್ಗೆ ಸರಕಾರವನ್ನು ಅವರು ಪ್ರಶ್ನಿಸಿದರು.
ನದಿ ಜೋಡಣೆಯ ಬದಲು ಅಂತರ್ಜಲ ಬರಿದಾಗಿಸುವ ಕಾರ್ಯಗಳನ್ನು ತಡೆಗಟ್ಟುವ ಕುರಿತು ಸರಕಾರ ನಿರ್ದೇಶನ ನೀಡಬೇಕು. ದೇಶದ ಶೇ.72ಕ್ಕೂ ಹೆಚ್ಚು ಅಂತರ್ಜಲ ಸಂಗ್ರಹಗಳಿಗೆ ಹರಿದು ಬರುವ ನೀರಿನ ಒರತೆಗಿಂತ ಅತ್ಯಧಿಕ ಪ್ರಮಾಣದಲ್ಲಿ ನೀರು ಬರಿದಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ಸರಕಾರ ಹಾಗೂ ಕಾರ್ಯನೀತಿ ರೂಪಿಸುವ ಅಧಿಕಾರಿಗಳು ಗಮನಿಸಬೇಕು. ನೀರಿನ ಒರತೆಯನ್ನು ಅಂತರ್ಜಲ ಸಂಗ್ರಹಾಗಾರಗಳಿಗೆ ಜೋಡಿಸುವ ಕಾರ್ಯ ಮೊದಲು ನಡೆಯಬೇಕಿದೆ ಎಂದು ಸಿಂಗ್ ಹೇಳಿದರು.
ತಾನು ಇತ್ತೀಚೆಗೆ ಒಡಿಶಾ, ಜಾರ್ಖಂಡ್ ಹಾಗೂ ಛತ್ತೀಸ್‌ಗಡ ರಾಜ್ಯಗಳಿಗೆ ಭೇಟಿ ನೀಡಿದ್ದು ಇಲ್ಲಿ ನೀರಿನ ಕೊರತೆಗೆ ನೀರಿನ ಅಸಮರ್ಪಕ ನಿರ್ವಹಣೆಯೇ ಮುಖ್ಯ ಕಾರ ಣವಾಗಿದೆ. ಈ ರಾಜ್ಯಗಳಲ್ಲಿ ಗಿಡಮರಗಳು ಕಡಿಮೆಯಾಗುತ್ತಿದ್ದು ಮಾಲಿನ್ಯದ ಮಟ್ಟ ಏರಿಕೆಯಾಗುತ್ತಿದೆ. ಇದರ ಬಗ್ಗೆ ಯಾರೂ ಗಮನ ಹರಿಸಿಲ್ಲ. ಈ ರಾಜ್ಯಗಳು ಐತಿಹಾಸಿಕವಾಗಿ ಬರಪೀಡಿತ ರಾಜ್ಯಗಳೇನಲ್ಲ. ವೃಕ್ಷ ಸಮೂಹದ ನಾಶದಿಂದಾಗಿ ಮಳೆಪ್ರಮಾಣ ಕಡಿಮೆಯಾಗಿದೆ. ಇದರ ಕಾರಣ ಇಲ್ಲಿ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.
ಎರಡು ನದಿಗಳನ್ನು ಜೋಡಿಸುವ ಮೂಲಕ ನೀರಿನ ಕೊರತೆಯಿರುವ ನದಿಗಳಿಗೆ ಸಾಕಷ್ಟು ನೀರಿನ ಸಂಗ್ರಹವಿರುವ ನದಿಗಳಿಂದ ನೀರು ಹರಿಸುವುದು ನದಿ ಜೋಡಣೆಯ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ದೇಶದ ಎಲ್ಲಾ ಪ್ರದೇಶಗಳಲ್ಲೂ ಸಾಕಷ್ಟು ನೀರು ಲಭ್ಯವಿರುವಂತೆ ನೋಡಿಕೊಳ್ಳುವುದು ಹಾಗೂ ನೆರೆ ಮತ್ತು ಬರಹಾವಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶವಿದೆ. ಆದರೆ ಇಂತಹ ಕ್ರಮಗಳಿಂದ ಆಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಜಲ ತಜ್ಞರು ಸರಕಾರವನ್ನು ಎಚ್ಚರಿಸಿದ್ದಾರೆ.
ಸರಕಾರ ಸುಮಾರು 30 ನದಿ ಜೋಡಣೆ ಯೋಜನೆಯನ್ನು ಗುರುತಿಸಿದ್ದು, ಇದರಂತೆ ಮಧ್ಯಪ್ರದೇಶದ ಕೆನ್ ಮತ್ತು ಬೆತ್ವಾ ನದಿ ಜೋಡಣೆ ಯೋಜನೆಯನ್ನು ಪ್ರಥಮವಾಗಿ ಕೈಗೆತ್ತಿಕೊಳ್ಳುವ ಉದ್ದೇಶವಿದೆ.







