ಅಭ್ಯರ್ಥಿಯಾಗುವ ಅರ್ಹತೆ ಇಲ್ಲದವರಿಗೆ ಶಾಸಕರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ: ಡಿ.ಜೆ.ಸುರೇಶ್

ಮೂಡಿಗೆರೆ, ಸೆ.16: ಅಸೆಂಬ್ಲಿ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿಯಾಗುವ ಅರ್ಹತೆ ಇಲ್ಲದ ಹಾಗೂ ಈ ಕ್ಷೇತ್ರದ ಮತದಾರನಲ್ಲದ ಬಿಜೆಪಿ ವ್ಯಕ್ತಿಯೋರ್ವರಿಗೆ ಈ ಕ್ಷೇತ್ರದ ಶಾಸಕರ ರಾಜಿನಾಮೆ ಕೇಳುವ ನೈತಿಕ ಹಕ್ಕು ಇಲ್ಲ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಹೇಳಿದರು.
ಅವರು ಶನಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸ ತಾಲೂಕು ರಚನೆ ಬಗ್ಗೆ ಶಾಸಕ ಬಿ.ಬಿ.ನಿಂಗಯ್ಯ ಅವರು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದರು. ಸಿಎಂ ಸಿದ್ದರಾಮಯ್ಯ ಸಹಿತ ಸಚಿವರ ಬಳಿಗೆ ಜೆಡಿಎಸ್ ನಿಯೋಗ ತೆರಳಿತ್ತು. ಪಕ್ಷ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದು, ಸರಕಾರದ ಮೇಲೆ ಒತ್ತಡ ಹೇರಿದೆ. ಅದರಂತೆ ಶುಕ್ರವಾರ ಮೂಡಿಗೆರೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ಕಳಸ ತಾಲೂಕು ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಇದು ಪಕ್ಷಕ್ಕೆ ಸಂದ ಜಯ ಎಂದು ತಿಳಿಸಿದರು.
ಜೆಡಿಎಸ್ ಬ್ಲಾಕ್ ಸಮಿತಿ ಅಧ್ಯಕ್ಷ ಲಕ್ಷ್ಮಣ್‍ಗೌಡ ಮಾತನಾಡಿ, ಕಳೆದ ಅವದಿಯಲ್ಲಿ 8 ವರ್ಷ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿದ್ದ ಅವಧಿಯಲ್ಲಿ 5 ವರ್ಷ ಅವರದ್ದೇ ಸರಕಾರ ಅಧಿಕಾರದಲ್ಲಿತ್ತು. ಆಗ ಕಳಸ ತಾಲೂಕು ರಚನೆಗೆ ಮುಂದಾಗಲಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಕಳಸಕ್ಕೆ ಶಾಸಕ ಬಿ.ಬಿ.ನಿಂಗಯ್ಯರ ಪ್ರಯತ್ನದಿಂದ ನ್ಯಾಯಾಲಯ ಸ್ಥಾಪನೆಯಾಗಿದೆ. ಬಲಿಗೆ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲು ಮುಂದಾದಾಗ ಹಾಗೂ ಇನಾಂ ಭೂಮಿ ಉಳಿವಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಳಸಕ್ಕೆ ಬಂದು ಸಮಾವೇಶ ನಡೆಸಿ ಸರಕಾರದ ಮೇಲೆ ಒತ್ತಡ ತಂದಿದ್ದಾರೆ ಎಂದರು.
ಬಿ.ಬಿ.ನಿಂಗಯ್ಯ ಶಾಸಕರಾದ ನಂತರ 450 ಕೋಟಿ ರೂ. ಅನುದಾನ ತಂದು ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದಂತೆ ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಜೆಪಿ ಮುಖಂಡ ಎನ್ನಿಸಿಕೊಂಡಿರುವ ದೀಪಕ್ ದೊಡ್ಡಯ್ಯ ಎಂಬರನ್ನು ಮುಂದೆ ಬಿಟ್ಟು, ಶಾಸಕರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ನಾಪತ್ತೆಯಾಗಿರುವ ಸಂಸದೆ ಶೋಭ ಕರಂದ್ಲಾಜೆ ಅವರನ್ನು ಹುಡುಕಿ ತರಲಿ ಎಂದು ಸವಾಲು ಹಾಕಿದರು.
ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಎಚ್.ಎಸ್.ಲಕ್ಷ್ಮಣ್ ಮಾತನಾಡಿ, ಬಿಜೆಪಿಗರಿಗೆ ದಲಿತರ ಕಷ್ಟವಾಗಲಿ, ಅಭಿವೃದ್ಧಿ ವಿಚಾರವಾಗಲಿ ಗೊತ್ತಿಲ್ಲ. ದೀಪಕ್ ದೊಡ್ಡಯ್ಯ ಶಾಸಕರ ರಾಜಿನಾಮೆಗೆ ಒತ್ತಾಯಿಸುತ್ತಾ ಮುಂದುವರೆದರೆ ಮೂಡಿಗೆರೆ ಕ್ಷೇತ್ರಕ್ಕೆ ಬರಲು ಮತದಾರರು ಬಿಡಲಾರರು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಬಿದರಹಳ್ಳಿ ಲೋಹಿತ್, ವಕ್ತಾರ ಎಸ್.ಎ.ವಿಜಯೇಂದ್ರ, ಮುಖಂಡರಾದ ಕೆ.ಎಂ.ರಾಜೇಂದ್ರ, ಜೇನುಬೈಲ್ ನಾಗೇಶ್, ಶಬ್ಬೀರ್ ಅಹ್ಮದ್, ಎಂ.ಕೆ.ರವಿ, ಯಾಕೂಬ್ ಗೋಣಿಗದ್ದೆ, ಜಿ.ಪಿ.ಪ್ರಕಾಶ್, ಹೆಚ್.ಇ.ಸುರೇಂದ್ರ ಉಪಸ್ಥಿತರಿದ್ದರು.







