ಗೋವಾ, ಕೇರಳ ಮಾದರಿಯಲ್ಲಿ ಬೀಚ್ ಅಭಿವೃದ್ಧಿ: ಸೊರಕೆ

ಕಾಪು, ಸೆ.16: ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕಾಪು, ಪಡುಬಿದ್ರಿ, ಕೈಪುಂಜಾಲು ಸಹಿತ ವಿವಿಧ ಕರಾವಳಿ ಪ್ರದೇಶಗಳನ್ನು ಗೋವಾ ಮತ್ತು ಕೇರಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಉಳಿಯಾರಗೋಳಿ ಯಾರ್ಡ್ ಫ್ರೆಂಡ್ಸ್ ನೇತೃತ್ವದಲ್ಲಿ ಸರಕಾರದ ಅನುದಾನ ದಿಂದ ಯಾರ್ಡ್ ಬೀಚ್‌ನಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಿಸಲಾದ ರಂಗ ಮಂಟಪ ಮತ್ತು ನಿರ್ವಹಣಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು. ಅಧ್ಯಕ್ಷತೆಯನ್ನು ಯಾರ್ಡ್ ಫ್ರೆಂಡ್ಸ್ ಅಧ್ಯಕ್ಷ ವಿನಯ ಸಾಲ್ಯಾನ್ ವಹಿಸಿದ್ದರು. ಉದ್ಯಮಿಗಳಾದ ಶಶಿಧರ ಶೆಟ್ಟಿ ಎರ್ಮಾಳು, ಪ್ರಭಾಕರ ಎಸ್.ಪೂಜಾರಿ, ಪುರಸಭಾ ಸದಸ್ಯ ಕಿರಣ್ ಆಳ್ವ, ಗಲ್ಪ್ ಪ್ರತಿನಿಧಿ ಅನಿಲ್ ಕಾಂಚನ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ರೇಣುಕಾ ಸುವರ್ಣ ಸ್ಮರಣಾರ್ಥ ಸ್ಥಳಿಯ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನೂತನ ರಂಗಮಂದಿರ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದ ಶಶಿಧರ್ ಸುರ್ಣ ಅವರನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷ ಅರುಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಕೋಶಾಧಿಕಾರಿ ಸೂರ್ಯನಾರಾಯಣ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯ ರಘಪತಿ ರಾವ್ ಸ್ವಾಗತಿಸಿದರು. ಸುಜಾತ ಮೆಂಡನ್ ವಂದಿಸಿದರು. ಉಪನ್ಯಾಸಕ ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿದರು.







