ಬಾಂಗ್ಲಾ: ರೊಹಿಂಗ್ಯಾರಿಗಾಗಿ 14,000 ಶಿಬಿರ
4 ಲಕ್ಷ ನಿರಾಶ್ರಿತರು; 10 ದಿನಗಳಲ್ಲಿ ಶಿಬಿರಗಳು ನಿರ್ಮಾಣ; ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳಿಂದ ನೆರವು

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 16: ಮ್ಯಾನ್ಮಾರ್‌ನಲ್ಲಿ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಪಲಾಯನಗೈದಿರುವ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರಿಗಾಗಿ ಬಾಂಗ್ಲಾದೇಶವು 14,000 ನೂತನ ಆಶ್ರಯ ಶಿಬಿರಗಳನ್ನು ನಿರ್ಮಿಸಲಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
ಈಗ ಅವರು ರಸ್ತೆಬದಿ, ಹೊಲಗಳು ಮತ್ತು ಗುಡ್ಡಗಳು- ಹೀಗೆ ಎಲ್ಲೆಂದರಲ್ಲಿ ನೆಲೆಸಿದ್ದಾರೆ.
ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರ ಸಂಘಟನೆಯೊಂದು ರಖೈನ್ ರಾಜ್ಯದಲ್ಲಿ ಪೊಲೀಸ್ ಮತ್ತು ಸೇನಾ ಠಾಣೆಗಳ ಮೇಲೆ ಆಕ್ರಮಣಗಳನ್ನು ನಡೆಸಿದ ಬಳಿಕ ಆರಂಭಗೊಂಡ ಹೊಸ ಸುತ್ತಿನ ಸೇನಾ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸುಮಾರು 4 ಲಕ್ಷ ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಕಾಕ್ಸ್ ಬಝಾರ್ ಜಿಲ್ಲೆಯ ಕುಟುಪಲಾಂಗ್‌ನಲ್ಲಿ ಈಗಾಗಲೇ ಇರುವ ರೊಹಿಂಗ್ಯ ನಿರಾಶ್ರಿತ ಶಿಬಿರದ ಸಮೀಪದಲ್ಲೇ 2000 ಎಕರೆ ಜಮೀನಿನಲ್ಲಿ ಬೃಹತ್ ಶಿಬಿರವೊಂದನ್ನು ನಿರ್ಮಿಸಲಾಗುವುದು ಎಂದು ಬಾಂಗ್ಲಾದೇಶ ಅಧಿಕಾರಿಗಳು ಹೇಳಿದರು.
‘‘ಸುಮಾರು 4 ಲಕ್ಷ ರೊಹಿಂಗ್ಯ ಮುಸ್ಲಿಮ್ ನಿರಾಶ್ರಿತರಿಗೆ 14,000 ಶಿಬಿರಗಳನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ’’ ಎಂದು ಬಾಂಗ್ಲಾದೇಶದ ವಿಪತ್ತು ನಿರ್ವಹಣೆ ಕಾರ್ಯದರ್ಶಿ ಶಾ ಕಮಲ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
‘‘10 ದಿನಗಳಲ್ಲಿ ಶಿಬಿರಗಳನ್ನು ನಿರ್ಮಿಸಲು ನಮಗೆ ಸೂಚಿಸಲಾಗಿದೆ. ಪ್ರತಿ ಶಿಬಿರದಲ್ಲಿ ಆರು ನಿರಾಶ್ರಿತ ಕುಟುಂಬಗಳು ವಾಸಿಸುತ್ತವೆ’’ ಎಂದರು. ಈ ಶಿಬಿರಗಳಲ್ಲಿ ಸೂಕ್ತ ನೈರ್ಮಲ್ಯ ವ್ಯವಸ್ಥೆ, ನೀರು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
‘‘ಇದಕ್ಕಾಗಿ ನಾವು ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳಿಂದ ನೆರವು ಪಡೆಯುತ್ತೇವೆ’’ ಎಂದರು.
ಮ್ಯಾನ್ಮಾರ್‌ನಿಂದ ಪದೇ ಪದೇ ವಾಯುಪ್ರದೇಶ ಉಲ್ಲಂಘನೆ: ಬಾಂಗ್ಲಾ
ಮ್ಯಾನ್ಮಾರ್ ತನ್ನ ವಾಯುಪ್ರದೇಶವನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ ಹಾಗೂ ತನ್ನ ‘ಪ್ರಚೋದನಕಾರಿ ಕೃತ್ಯ’ಗಳನ್ನು ಅದು ಇನ್ನು ಮುಂದುವರಿಸಿದರೆ ‘ಅನಗತ್ಯ ಪರಿಣಾಮ’ಗಳಿಗೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ.
ಸೆಪ್ಟಂಬರ್ 10, 12 ಮತ್ತು 14ರಂದು ಒಟ್ಟು ಮೂರು ಬಾರಿ ಮ್ಯಾನ್ಮಾರ್‌ನ ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿವೆ ಹಾಗೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಾನು ಢಾಕಾದಲ್ಲಿರುವ ಮ್ಯಾನ್ಮಾರ್ ರಾಯಭಾರ ಕಚೇರಿಯ ಉನ್ನತ ಅಧಿಕಾರಿಯೊಬ್ಬರಿಗೆ ಕರೆ ಮಾಡಿರುವುದಾಗಿ ಬಾಂಗ್ಲಾ ಹೇಳಿದೆ.
‘‘ಇಂಥ ಪ್ರಚೋದನಕಾರಿ ಕೃತ್ಯಗಳು ಪದೇ ಪದೇ ನಡೆಯುತ್ತಿರುವ ಬಗ್ಗೆ ಬಾಂಗ್ಲಾದೇಶ ತೀವ್ರ ಆತಂಕ ವ್ಯಕ್ತಪಡಿಸಿದೆ ಹಾಗೂ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಇಂಥ ಕೃತ್ಯಗಳು ಇನ್ನು ಮುಂದೆ ನಡೆಯದಂತೆ ಖಾತರಿಪಡಿಸುವಂತೆ ಮ್ಯಾನ್ಮಾರನ್ನು ಒತ್ತಾಯಿಸಿದೆ’’ ಎಂದು ಸಚಿವಾಲಯ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.







