ಜಾರ್ಜ್ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಸೆ. 16: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಕೇಳುವ ಯಾವುದೇ ನೈತಿಕತೆ ಬಿಜೆಪಿ ಮುಖಂಡರಿಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ಅವರ ಹೆಸರಿಲ್ಲ, ಸುಪ್ರೀಂ ಕೋರ್ಟ್ ಸಿಐಡಿ ವರದಿಯನ್ನು ರದ್ದುಪಡಿಸಿಲ್ಲ. ಬದಲಿಗೆ ತನಿಖೆಗೆ ಆದೇಶ ನೀಡಿದೆ. ಹೀಗಾಗಿ ಅವರೇಕೆ ರಾಜೀನಾಮೆ ನೀಡಬೇಕೆಂದು ಪ್ರಶ್ನಿಸಿದರು.
ಕೇಂದ್ರದ ಹಲವು ಮಂತ್ರಿಗಳ ಮೇಲೆಯೂ ಸಿಬಿಐ ತನಿಖೆ ನಡೆಯುತ್ತಿದೆ. ಆದರೂ ಅವರ್ಯಾರು ರಾಜೀನಾಮೆ ನೀಡಿಲ್ಲ. ಹೀಗಿರುವಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಚಿವ ಜಾರ್ಜ್ ಅವರ ರಾಜೀನಾಮೆ ಕೇಳುವ ಕನಿಷ್ಠ ನೈತಿಕತೆ ಬಿಜೆಪಿಗೆ ಇದೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜಾರ್ಜ್ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದರು.







