ಸೆ.18 ರಂದು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ: ಜ್ಞಾನ ಪ್ರಕಾಶ್ ಸ್ವಾಮೀಜಿ

ಮೈಸೂರು, ಸೆ.16: ಮಹಿಷಾ ದಸರಾ-2017 ಮೂಲ ನಿವಾಸಿಗಳ ಮಹಿಷಾ ಸಾಂಸ್ಕೃತಿಕ ಹಬ್ಬವನ್ನು ಸೆ.18 ರಂದು ಮಧ್ಯಾಹ್ನ 12ಕ್ಕೆ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಉರುಲಿಂಗ ಪೆದ್ದ ಮಹಾಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರಿನ ಮೂಲ ನಿವಾಸಿಗಳಿಂದ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಪುರ ಭವನದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪ್ರಾಧ್ಯಾಪಕ ಪ್ರೊ.ಶಬೀರ್ ಮುಸ್ತಾಫ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮವನ್ನು ವಿಚಾರವಾದಿ ಎ.ಕೆ.ಸುಬ್ಬಯ್ಯ ಮಹಿಷನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಶ್ರೀ ಸಿದ್ದಸ್ವಾಮಿ ರಚಿಸಿರುವ “ದೇವರುಗಳ ಲೈಂಗಿಕ ರಹಸ್ಯ” ಮತ್ತು ಎಸ್.ಸಿದ್ದಾರ್ಥ ಎಂಬ ಆರ್ಕೆಸ್ಟ್ರಾ ಕೋಗಿಲೆ ಹಾಗೂ ಪ್ರೊ.ಮಹೇಶ್ ಚಂದ್ರಗುರು ರಚಿಸಿರುವ ಹಿಂದೂಗಳು ಧನದ ಮಾಂಸ ತಿನ್ನುತ್ತಿದ್ದರು” ಎಂಬ ಮೂರು ಪುಸ್ತಕಗಳನ್ನು ಪ್ರಗತಿಪರ ಹೋರಾಟ, ಚಿಂತಕ ಮಾಯೀಗೌಡ ಬಿಡುಗಡೆ ಮಾಡಲಿದ್ದಾರೆ ಎಂದರು.
ಪುಸ್ತಕ ಕುರಿತು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ಪ್ರಾಧ್ಯಾಪಕ ಪ್ರೊ.ಸಿ.ಬಸವರಾಜು, ಪ್ರಾಧ್ಯಾಪಕ ಪ್ರೊ.ಮಹೇಶ್‍ಚಂದ್ರಗುರು ಮಾತನಾಡಲಿದ್ದು, ಅಧ್ಯಕ್ಷತೆಯನ್ನು ದಲಿತ ವೆಲ್‍ಫೇರ್ ಟ್ರಸ್ಟ್‍ನ ಶಾಂತರಾಜು ವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಿವಿಧ ಸಮುದಾಯದ ಮಠಾಧೀಶರಾದ ಸಿದ್ದರಾಮ ಶಿವಯೋಗಿಸ್ವಾಮಿ, ಬಸವ ಲಿಂಗಮೂರ್ತಿ ಸ್ವಾಮೀಜಿ, ಸೂಫಿಸಂತರಾದ ಅಜೀ ಮುಲಿಸ್ತಾ ಚಿಸ್ತಿ ಉಪಸ್ಥಿತರಿದ್ದರು.







