ಮಕ್ಕಳ ಸಾಗಟ ನಿಯಂತ್ರಣಕ್ಕೆ ಸಹಕಾರ ಅಗತ್ಯ: ಕೈಲಾಶ್ ಸತ್ಯಾರ್ಥಿ

ಬೆಂಗಳೂರು, ಸೆ.16: ಮಕ್ಕಳ ಲೈಂಗಿಕ ಕಿರುಕುಳ ಮತ್ತು ಸಾಗಣೆಯನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಕರೆ ನೀಡಿದ್ದಾರೆ.
ಶನಿವಾರ ಕಾರ್ಮಿಕ ತರಬೇತಿ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಿದ್ದ ಫೆವರ್ಡ್ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸಂಘಗಳು ಮತ್ತು ಕ್ರೈಸ್ತ ವಿಶ್ವವಿದ್ಯಾಲಯ ಬಾಲ್ಯ ಮತ್ತು ಸುರಕ್ಷಿತ ‘ಭಾರತ ಯಾತ್ರೆ’ಗೆ ಅವರು ಚಾಲನೆ ನೀಡಿ ಮಾತನಾಡಿದರು.
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮಕ್ಕಳ ರಕ್ಷಣೆ ಅತಿ ಮುಖ್ಯ. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನದಲ್ಲಿ ಸಿಲಿಕಾನ್ ಸಿಟಿ ಮುಂಚೂಣಿಯಲ್ಲಿದೆ. ಮಕ್ಕಳ ಮೇಲೆ ನಡೆದ ದೌರ್ಜನ್ಯ ದಾಖಲೆಗಳನ್ನು ತಾಂತ್ರಿಕವಾಗಿ ದಾಖಲು ಮಾಡಲು ತಂತ್ರಜ್ಞ್ಞಾನವನ್ನು ಸಿದ್ಧಪಡಿಸುವ ಅನಿರ್ವಾಯತೆ ಇದೆ. ಈ ಕುರಿತು ಸರಕಾರಗಳು ಮುತುವರ್ಜಿ ವಹಿಸಬೇಕು ಎಂದರು.
ಮಕ್ಕಳು ತಮಗಾದ ತೊಂದರೆ ಮತ್ತು ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಕುಟುಂಬದಲ್ಲಿ ನಿರ್ಮಿಸಬೇಕು. ಮಕ್ಕಳು ದೇವರ ಸ್ವಭಾವದವರು. ಅವರನ್ನು ನಿರ್ಲಕ್ಷಿಸುವುದು ಸಲ್ಲದು. ಅವರ ಭವಿಷ್ಯ ಉತ್ತಮವಾಗಿಸುವ ಜವಾಬ್ದಾರಿ ಪೋಷಕರದು ಮತ್ತು ಶಿಕ್ಷಕರದು, ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಎಸ್. ನಾಗೇಂದ್ರ, ರೋಟರಿ ಕಲ್ಯಾಣ್ ಅಧ್ಯಕ್ಷ ಜಾನ್, ಕರ್ನಾಟಕ ರಾಜ್ಯ ಸ್ವಯಂಸೇವಕ ಸಂಘಗಳ ಅಧ್ಯಕ್ಷ ರಾಮಕೃಷ್ಣ ಗೌಡ ಸೇರಿದಂತೆ ಇತರರು ಇದ್ದರು.







