ಕಾರಾಗೃಹದಲ್ಲಿ ಅಸ್ವಾಭಾವಿಕ ಸಾವಿನ ಸಂಖ್ಯೆ ಇಳಿಸಿ: ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂಕೋರ್ಟ್ ನಿರ್ದೇಶ

ಹೊಸದಿಲ್ಲಿ, ಸೆ. 16: ಇಸವಿ 2012-2015ರ ನಡುವೆ ಹಾಗೂ ಅದರ ನಂತರ ಕಾರಾಗೃಹದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟ ಕೈದಿಗಳ ಕುಟುಂಬವನ್ನು ಗುರುತಿಸಲು ಹಾಗೂ ಸೂಕ್ತ ಪರಿಹಾರ ನೀಡಲು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿಕೊಳ್ಳುವಂತೆ ಎಲ್ಲ ಉಚ್ಚ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಕಾರಾಗೃಹದಲ್ಲಿ ಸಂಭವಿಸುತ್ತಿರುವ ಅಸಹಜ ಸಾವುಗಳನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಕಾರಾಗೃಹಗಳ ದಯನೀಯ ಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲಲಾಗಿತ್ತು. ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡು ಸುಪ್ರೀಂ ಕೋರ್ಟ್‌ನ ಪೀಠ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಉಚ್ಚ ನ್ಯಾಯಾಲಯಗಳಿಗೆ ಈ ನಿರ್ದೇಶನ ನೀಡಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೊದ ದತ್ತಾಂಶದ ಪ್ರಕಾರ 2012-2015ರ ನಡುವೆ ದೇಶಾದ್ಯಂತದ ಕಾರಾಗೃಹಗಳಲ್ಲಿ 328 ಆತ್ಮಹತ್ಯೆ ಸೇರಿದಂತೆ 551 ಅಸ್ವಾಭಾವಿಕ ಸಾವುಗಳು ಸಂಭವಿಸಿವೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗ 2014ರಲ್ಲಿ ಪ್ರಕಟಿಸಿದ ಏಕೀಕೃತ ಅಧ್ಯಯನದ ಕೈಪಿಡಿಯಲ್ಲಿ 2007ರಿಂದ 2011ರ ನಡುವೆ ಕಾರಾಗೃಹಗಳಲ್ಲಿ ಸಂಭವಿಸಿದ ಒಟ್ಟು ಅಸ್ವಾಭಾವಿಕ ಸಾವಿನಲ್ಲಿ ಶೇ. 71 ಆತ್ಮಹತ್ಯೆ ಎಂದಿದೆ.
ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯ ಸಂದರ್ಭ ಸುಪ್ರೀಂ ಕೋರ್ಟ್ ಎನ್‌ಎಚ್‌ಆರ್‌ಸಿಯ ಕೈಪಿಡಿಯನ್ನು ಉಲ್ಲೇಖಿಸಿದೆ.







