ಜನಪ್ರಿಯವಲ್ಲದ ಪ್ರೇಕ್ಷಣೀಯ ಸ್ಥಳಗಳ ಪರಿಚಯಕ್ಕೆ ಹೊಸ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆ.16: ಪ್ರವಾಸಿಗರ ಮನೆ ಬಾಗಿಲಿನಿಂದಲೇ ಕರೆದೊಯ್ದು ಜನಪ್ರಿಯವಲ್ಲದ ಪ್ರೇಕ್ಷಣೀಯ ತಾಣಗಳನ್ನು ಪರಿಚಯಿಸುವ ನೂತನ ಯೋಜನೆಗೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಚಾಲನೆ ನೀಡಿದರು.
ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಜವಾಬ್ದಾರಿಯುತ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಓಲಾ ಕಂಪೆನಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ರೂಪಿಸಿರುವ ಹೊಸ ಯೋಜನೆ ಜಾರಿ ನಿಜಕ್ಕೂ ಸಂತಸ ತಂದಿದೆ ಎಂದು ಖರ್ಗೆ ಹೇಳಿದರು.
ಕರ್ನಾಟಕ ಒಂದು ರಾಜ್ಯ, ಅನೇಕ ಜಗತ್ತು. ಪ್ರಕೃತಿ, ವನ್ಯಜೀವಿ, ಸಮುದ್ರ ತೀರಗಳು, ಬೆಟ್ಟಗುಡ್ಡ, ಸಾಹಸ, ಪರಂಪರೆ, ಧಾರ್ಮಿಕ ಸ್ಥಳಗಳು ಸೇರಿದಂತೆ ಅತ್ಯುತ್ತಮವಾದವುಗಳನ್ನು ರಾಜ್ಯದಲ್ಲ್ಲಿ ಕಾಣಬಹುದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಈಗ ನೂತನ ಪ್ಯಾಕೇಜ್‌ಗಳನ್ನು ಪ್ರವಾಸಿಗರಿಗಾಗಿ ರೂಪಿಸಿದೆ ಎಂದು ಅವರು ಹೇಳಿದರು.
‘ವಿಶ್ವ ಪ್ರವಾಸಿ ದಿನ’ಕ್ಕಾಗಿ ವಿಶ್ವಸಂಸ್ಥೆ ಘೋಷ ವಾಕ್ಯಕ್ಕೆ ಅನುಗುಣವಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರವಾಸೋದ್ಯಮ ಪ್ರಚಾರದ ಭಾಗವಾಗಿ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ, ಪರಿಸರ ಸ್ನೇಹಿ ಪ್ರವಾಸೋದ್ಯಮದ ಅಭಿಯಾನದ ಭಾಗವಾಗಿ ಹಾಗೂ ಜನಪ್ರಿಯವಲ್ಲದ ತಾಣಗಳ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಜನಪ್ರಿಯ ನಟಿ ವ್ಲೋಗರ್ ಶೆನಾಜ್ ಟ್ರೆಸರಿ ಆಕರ್ಷಕ ವಾಸ್ತುಶಿಲ್ಪ ಪ್ರವಾಸಿ ತಾಣಗಳಾದ ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು ಕುರಿತು ಪ್ರಚಾರ ಮಾಡಲಿದ್ದಾರೆ ಎಂದರು.
ಓಲಾ ಕಂಪೆನಿಯ ಪ್ರಣಯ್ ಜೀವ್‌ರಾಜಕಾ ಮಾತನಾಡಿ, ಭಾರತದ ಪ್ರವಾಸೋದ್ಯಮವು ಪ್ರಗತಿ ಹೊಂದುತ್ತಿದ್ದು, ಪ್ರವಾಸಿಗರ ಸಂಚಾರವು ಹೆಚ್ಚುತ್ತಿದೆ. ಇದು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಪ್ರಚಾರ ಮಾಡುವುದು ಮುಖ್ಯವಾಗಲಿದೆ ಎಂದರು.
ಪ್ರವಾಸಿಗರು ಸ್ಥಳೀಯ ಸಂಸ್ಕೃತಿ ಅರಿಯುವ ನಿಟ್ಟಿನಲ್ಲಿ ಆದಷ್ಟು ಪ್ರವಾಸ ತೆರಳಬೇಕು, ಸುಸ್ಥಿರ ಪ್ರವಾಸೋದ್ಯಮದ ಪ್ರಗತಿಗೆ ಓಲಾ ಔಟ್‌ಸ್ಟೇಷನ್ ಮೂಲಕ ಒತ್ತು ನೀಡಲು ಸಂತಸವಾಗುತ್ತಿದೆ ಎಂದು ಪ್ರಣವ್ ಜೀವ್‌ರಾಜಕಾ ಇದೇ ವೇಳೆ ತಿಳಿಸಿದರು.
ನಟಿ ಶೇನಾಜ್ ಟ್ರಸರಿ ಅವರು ಮಾತನಾಡಿ, ಭಾರತ ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯಲಿದೆ, ನಾನು ಪ್ರವಾಸಿ ಪ್ರಿಯಳು. ಪ್ರವಾಸ ತೆರಳುವ ಮೂಲಕ ನಾವು ಪ್ರೇಕ್ಷಣೀಯ ಸ್ಥಳಗಳನ್ನು ಉಳಿಸಬೇಕಾಗಿದೆ. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡಬಹುದು. ನಾನು ಈ ಯೋಜನೆಗೆ ರಾಯಭಾರಿಯಾಗಿರುವುದು ಸಂತಸ ತಂದಿದೆ. ಕರ್ನಾಟಕದ ಪುರಾತತ್ವ, ಪ್ರಾಚೀನ ದೇಗುಲಗಳಿಗೆ ಓಲಾ ಔಟ್‌ಸ್ಟೇಷನ್ ಜೊತೆಗೂಡಿ ಹೋಗುವುದು ಖುಷಿ ಸಂಗತಿ ಎಂದರು.
‘ಹಿರಿಯ ನಾಗರಿಕರಿಗೆ ತೀರ್ಥಕ್ಷೇತ್ರ ಮತ್ತು ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ವಿಶ್ವ ವಿಖ್ಯಾತ ವೆೆುಸೂರು ದಸರಾ ಉತ್ಸವದ ಸಂದರ್ಭದಲ್ಲಿ ‘ಪುನೀತ ಯಾತ್ರೆ’ ಎಂಬ ನೂತನ ಯೋಜನೆಗೂ ಚಾಲನೆ ನೀಡಲಾಗುವುದು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ್ನನು ಮೈಸೂರು ದಸರಾ ಸಂದರ್ಭದಲ್ಲೆ ಆಚರಿಸಲಾಗುವುದು.’
-ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ







