ದುಡಿಯುವ ವರ್ಗ, ಬಡಜನರ ಪರ ಸಹಕಾರ ಸಂಘಗಳು ಕಾರ್ಯನಿರ್ವಹಿಸಲಿ: ಪ್ರೊ. ಕೆ.ದೊರೈರಾಜ್
.jpg)
ತುಮಕೂರು, ಸೆ.16: ಸಹಕಾರ ಸಂಘಗಳು ದುಡಿಯುವ ವರ್ಗದ ಜನರು ಮತ್ತು ಬಡಜನತೆ ಉತ್ತಮವಾದ ಆರ್ಥಿಕ ಪ್ರಗತಿಯನ್ನು ಹೊಂದಲು ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಚಿಂತಕ ನಿವೃತ್ತ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಕೆ.ದೊರೈರಾಜ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶಿರಾಗೇಟ್ ಸೌಹಾರ್ದ ಸಹಕಾರ ಸಂಘವು ಪುಟ್ಟಸ್ವಾಮಯ್ಯನ ಪಾಳ್ಯದ ಸಮುದಾಯ ಭವನದಲ್ಲಿ ತನ್ನ 6ನೆ ವರ್ಷದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಅಸಂಖ್ಯಾತ ವಲಯದ ಜನ ದೇಶದ ಆರ್ಥಿಕತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ನಮ್ಮ ದೇಶದ ಆರ್ಥಿಕತೆಯು ಶೇ.96 ರಷ್ಟು ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಕೈಯಲ್ಲಿದ್ದು, ಕೇವಲ 4%ರಷ್ಟು ಬಂಡವಾಳ ಮಾತ್ರ ಇತರ ವರ್ಗದ ಜನರಲ್ಲಿದೆ ಎಂದು ತಿಳಿಸಿದರು.
ಸಿಐಟಿಯುನ ಸಂದೇಶ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಸೈಯದ್ ಮುಜೀಬ್ ಮಾತನಾಡಿ, ಜನರ ಆರ್ಥಿಕತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಾಗೇಟ್ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ. ಇಂದು ಹಣಗಳನ್ನು ದ್ವಿಗುಣ ಮಾಡುವ ಹೆಸರಿನಲ್ಲಿ ವಂಚಿಸುವ ಸಂಸ್ಥೆಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಸಹಕಾರ ಸಂಘದ ಶಿವಣ್ಣ ಎಚ್.ಡಿ.ಮಾತನಾಡಿ, ಸಹಕಾರಿ ನಿಯಮಿತದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಸಲಹೆಯನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಎ.ಲೋಕೇಶ್‍ರವರು ಮಾತನಾಡಿ, ಆರು ವರ್ಷಗಳಿಂದ ಬಡಜನರನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಹಲವು ಆಶಯಗಳೊಂದಿಗೆ ಆರಂಭವಾದ ಸಂಘವು ಇಂದು ದೊಡ್ಡಮಟ್ಟದಲ್ಲಿ ಉತ್ತಮವಾದ ಕಾರ್ಯವನ್ನು ನಿರ್ವಹಿಸುತ್ತಿದ್ದೆ. ಮುಂದಿನ ದಿನಗಳಲ್ಲಿ ಬಡಜನರಿಗೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘದಿಂದ ಉಚಿತ ಟೈಲರಿಂಗ್ ತರಬೇತಿ, ಕಪ್ಯೂಟರ್ ತರಬೇತೆ ಸೇರಿದಂತೆ ಗೃಹಬಳಕೆಯ ವಸ್ತುಗಳ ತಯಾರಿಕೆಯ ತರಬೇತಿಗಳನ್ನು ನೀಡಲಾಗುವುದು ಎಂದರು.
ಸಮಾರಂಭದಲ್ಲಿ ನಿರ್ದೇಶಕರಾದ ಬಿ.ಷಣ್ಮುಖಪ್ಪ,ಆನಂದ್‍ರಾಜ್ ಸೇರಿಂದತೆ ಮುಂತಾದವರು ಉಪಸ್ಥಿತರಿದ್ದರು







