ಮಂಗಳೂರು ವಿ.ವಿಯಲ್ಲಿ ಆನ್ ಲೈನ್ ಕೋರ್ಸ್ :ಐಟಿಐ ಪಾಸಾದವರಿಗೆ ಪದವಿ ಶಿಕ್ಷಣಕ್ಕೆ ಅವಕಾಶ
ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ
ಮಂಗಳೂರು, ಸೆ.16: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2017-18ನೆ ಸಾಲಿನ ದ್ವಿತೀಯ ಸೆಮಿಸ್ಟರ್‌ನಲ್ಲಿ ಆನ್ ಲೈನ್ ಕೋರ್ಸ್ ಅಭ್ಯಸಿಸಲು ಹಾಗೂ ಮುಕ್ತ ಶೈಕ್ಷಣಿಕ ಸಂಪನ್ಮೂಲದ ಬಳಕೆಯ ಬಗ್ಗೆ ಹಾಗೂ ಅಭ್ಯಸಿಸಲು ಯುಜಿಸಿ ನಿರ್ದೇಶನದ ಪ್ರಕಾರ ಸಾಧ್ಯವಾಗುವಂತೆ ಅಗತ್ಯವಿರುವ ಕ್ರಮ ಗಳನ್ನು ಕೈ ಗೊಳ್ಳಲು ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ.
ಕುಲಪತಿ ಕೆ. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ 2017-18ನೆ ಸಾಲಿನ ಶೈಕ್ಷಣಿಕ ಮಂಡಳಿಯ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿ ಸಲಾಯಿತು. ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ನಡೆಸುವ ಐಟಿಐ ಮತ್ತು ಡಿಪ್ಲೋಮಾ ಕೋರ್ಸುಗಳನ್ನು ದ್ವಿತೀಯ ಪಿಯುಸಿಗೆ ಸಮಾನವೆಂದು ಪರಿಗಣಿಸಿ ಸದರಿ ಕೋರ್ಸ್‌ಗಳಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಆಯಾಯ ಪದವಿಗಳಿಗೆ ನಿಗದಿ ಪಡಿಸಿದ ಪ್ರವೇಶಾರ್ಹತೆಯನ್ನು ಪೂರೈಸುವ ಷರತ್ತಿಗೊಳಪಟ್ಟು ಅವಕಾಶ ನೀಡುವ ಪ್ರಸ್ತಾಪಕ್ಕೆ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ.
ಯುಜಿಸಿ ನಿರ್ದೇಶನದ ಪ್ರಕಾರ (ಎಂಒಒಸಿ )ಸಮಗ್ರವಾದ ಮುಕ್ತ ಆನ್ ಲೈನ್ ಕೋರ್ಸ್‌ನ್ನು ಈ ಶೈಕ್ಷಣಿಕ ವರ್ಷದಿಂದಲೇ ಸಂಬಂಧಿಸಿದ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವ ಬಗ್ಗೆ ಈಗಾಗಲೇ ಸಿಂಡಕೇಟ್ ಸಭೆ ಅನುಮೋದನೆ ನೀಡಿದ್ದು, ಶೈಕ್ಷಣಿಕ ಮಂಡಳಿಯು ಅನುಮೋದನೆ ನೀಡಿದೆ.
350 ಕೋರ್ಸ್‌ಗಳನ್ನು ಒಳಗೊಂಡಂತೆ ಹಾಲಿ ವರ್ಷದಿಂದಲೇ ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ದ್ವಿತೀಯ ಸೆಮಿಸ್ಟರ್‌ನಲ್ಲಿ ಓಪನ್ ಇಲೆಕ್ಟಿವ್ ಕೋರ್ಸ್ ಹಾಗೂ ಸಾಪ್ಟ್ ಕೋರ್ ಕೋರ್ಸ್‌ಗಳನ್ನು ಆನ್‌ಲೈನ್ ಮೂಲಕ ಅಭ್ಯಸಿಸಲು ಸಾಧ್ಯವಾಗುವಂತೆ ಸಲ್ಲಿಸಲಾದ ಪ್ರಸ್ತಾವನೆಯನ್ನು ಸಭೆಯಲ್ಲಿ ಅನುಮೋದಿಸಲಾಯಿತು.
ಈ ಬಗ್ಗೆ ವಿದ್ಯಾರ್ಥಿಗಳಿಗೆ ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಸೂಚನೆ ಹಾಗೂ ಮಾರ್ಗದರ್ಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಕುಲಪತಿ ಭೈರಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ 2016-17ನೆ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಪದವಿ ಮಟ್ಟದ ಕನ್ನಡ ಭಾಷಾ ಪಠ್ಯಕ್ರಮದಲ್ಲಿ ಬಿ.ಸಿ.ಎ ಪದವಿಗೆ ನಿಗದಿ ಪಡಿಸಿದ ಬರಗೂರು ರಾಮಚಂದ್ರಪ್ಪ ಅವರ ಯುದ್ಧ ಒಂದು ಉದ್ಯಮ ಪಾಠವನ್ನು ಮಾಜಿ ಸೈನಿಕರು ತೋರಿದ ವಿರೋಧದ ಕಾರಣ ಮಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿ ಸದ್ರಿ ಪಾಠವನ್ನು ಪಠ್ಯಕ್ರಮದಿಂದ ಹಿಂದಕ್ಕೆ ಪಡೆಯಲು ನಿರ್ಣಯಿಸಿರುತ್ತದೆ ಎಂದು ಶೈಕ್ಷಣಿಕ ಮಂಡಳಿಯ ಸಭೆಯ ಗಮನಕ್ಕೆ ತರಲಾಯಿತು.
ಸ್ನಾತಕ ಪದವಿ ಕಾರ್ಯಕ್ರಮಗಳ 5 ಮತ್ತು 6ನೆ ಸೆಮಿಸ್ಟರ್‌ಗಳಲ್ಲಿ ಅನುತ್ತಿರ್ಣರಾದವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ವಿಶ್ವ ವಿದ್ಯಾನಿಲಯಕ್ಕೆ ಧ್ಯೇಯ ಗೀತೆ ರಚನೆ:- ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಅಮೃತ ಸೋಮೇಶ್ವರರು ರಚಿಸಿದ, ಗುರುಕಿರಣ್ ಸಂಗೀತ ಸಂಯೋಜಿಸಿದ ಗೀತೆಯನ್ನು ಧ್ಯೇಯ ಗೀತೆಯಾಗಿ ಅಳವಡಿಸುವ ಪ್ರಸ್ತಾಪಕ್ಕೆ ಸಿಂಡಿಕೇಟ್ ಅನುಮೋದನೆ ನೀಡಿದೆ.
‘ಜ್ಞಾನವೇ ಬೆಳಕು’ಎಂಬ ಧ್ಯೇಯವನ್ನು ಹೊಂದಿರುವ ಈ ಗೀತೆಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳೆ ಹಾಡಿದ್ದಾರೆ ಎಂದು ಕುಲಪತಿ ಬೈರಪ್ಪ ತಿಳಿಸಿದ್ದಾರೆ.
ಸೆ.26-27 ವಿಶ್ವ ವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ:- ಮಂಗಳೂರು ವಿಶ್ವ ವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಸೆ. 26-27ರಂದು ಆಚರಿಸುವ ಉದ್ದೇಶ ಹೊಂದಲಾಗಿದೆ. ಭಾರತ ಸರಕಾರದ ರಕ್ಷಣಾ ವಿಭಾಗದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ಅಧಿಕಾರಿ ಆರ್.ಕೆ.ಶರ್ಮಾ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬೈರಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ.ದಯಾನಂದ ನಾಯಕ್, ಕುಲಸಚಿವ ಕೆ.ಎಂ.ಲೋಕೇಶ್, ಪರೀಕ್ಷಾಂಗ ಕುಲಸಚಿವ ಎ.ಎಂ.ಖಾನ್ ಮೊದಲಾದವರು ಉಪಸ್ಥಿತರಿದ್ದರು.