ಹಲವು ಕಷ್ಟಗಳ ನಡುವೆ ಮಹಿಳೆಯರಿಗೆ ಶಿಕ್ಷಣ ನೀಡಿದ ಪುಲೆ ದಂಪತಿ: ಡಾ.ನಾಗಭೂಷಣ್

ತುಮಕೂರು, ಸೆ.16: ಮಹಾತ್ಮ ಜೋತಿ ಬಾಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ಶೂದ್ರರು, ಹೆಣ್ಣು ಮಕ್ಕಳಿಗೆ ಹಲವಾರು ಕಷ್ಟ ನಷ್ಟಗಳ ನಡುವೆಯೂ ಅಕ್ಷರ ಜ್ಞಾನ ನೀಡಿ ಜಗತ್ತನೆ ಬೆಳಗುವಂತೆ ಮಾಡಿದ್ದಾರೆ ಎಂದು ತುಮಕೂರು ಕನ್ನಡ ಉಪನ್ಯಾಸ ಡಾ.ನಾಗಭೂಷಣ್ ತಿಳಿಸಿದ್ದಾರೆ.
ಗೌತಮ ಬುದ್ಧ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತುಮಕೂರಿನ ಹೆಣ್ಣುಮಕ್ಕಳ ಹಾಸ್ಟೆಲ್‍ನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜ್ಯೋತಿಬಾಪುಲೆ, ಸಾವಿತ್ರಿ ಬಾಯಿ ಪುಲೆಯ ಜಯಂತಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗಾಗಿ ಶಾಲೆಯ ತೆರೆದಾಗ ಹಲವರು ದಂಪತಿಗಳಿಗೆ ಟೊಮೆಟೊ ಎಸೆಯುವುದು, ಸಗಣಿ ನೀರು ಎರಚುವುದು ಮಾಡಿ ಹೆದರಿಸುವ ತಂತ್ರ ಮಾಡಿದರು. ಇವುಗಳೆಲ್ಲವನ್ನು ಸಹಿಸಿ ಶೂದ್ರಾತಿಶೂದ್ರರಿಗೆ ಶಿಕ್ಷಣ ನೀಡಿದರು ಎಂದರು.
ಉಪನ್ಯಾಸಕ ಗಂಗಬ್ಶೆರಯ್ಯ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ಶೂದ್ರರಿಗೆ ಹಾಗೂ ಬ್ರಾಹ್ಮಣೇತರರಿಗೆ 1902ರಲ್ಲಿ ಶೇ.50 ರಷ್ಟು ಮೀಸಲಾತಿಯನ್ನು ನೀಡಿದವರು. ಬರೋಡದ ಸಾಹು ಮಹಾರಾಜ್, ಅವರ ದಯೆಯಿಂದಲೇ ಅಂಬೇಡ್ಕರ್ ವಿದೇಶಕ್ಕೆ ಹೋಗಿ ಬಾರ್ ಅಟ್ ಲಾ ಕಲಿಯುವಂತಾಯಿತು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಮಾತನಾಡಿ, ಅಂಬೇಡ್ಕರ್‍ರವರನ್ನು ಮಾನೆಗಾಂವ್ ಎಂಬ ಸಮಾವೇಶದಲ್ಲಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಶಾಹುಮಹಾರಾಜ್‍ರವರಿಗೆ ಸಲ್ಲುತ್ತದೆ. ಇನ್ನು ಮುಂದೆ ರಾಷ್ಟ್ರಮಟ್ಟದಲ್ಲಿ ಡಾ. ಬಿ.ಆರ್.ಅಂಬೇಡ್ಕರ್‍ರವರು ಸಾಮಾಜಿಕ ಪರಿವರ್ತನಾ ಚಳುವಳಿಯ ಹೋರಾಟವನ್ನು ಮುನ್ನಡೆಸುತ್ತಾರೆ ಎಂದು ಘೋಷಿಸಿದ್ದರು ಎಂದು ತಿಳಿಸಿದರು.
ಉಪನ್ಯಾಸಕ ರಂಗಧಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಮೀಸಲಾತಿಯ ಋಣವನ್ನು ತೀರಿಸಬೇಕಾದ ಕರ್ತವ್ಯ ವಿದ್ಯಾವಂತ ಸಮುದಾಯ ಮತ್ತು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ನೌಕರರ ಮೇಲೆ ಇದೆ. ಸಮಾಜಕ್ಕೆ ಮರಳಿಕೊಡು ಎಂಬ ತತ್ವದಡಿಯಲ್ಲಿ ಅಂಬೇಡ್ಕರ್‍ರವರ ಸಂವಿಧಾನದ ಆಶಯಗಳನ್ನು ಹಾಗೂ ಸಮಾಜವನ್ನು ಉತ್ತಮ ದಾರಿಗೆ ಕೊಂಡ್ಯೋಯಬೇಕಾದ ಜವಾಬ್ದಾರಿ ಇಂದಿನ ವಿದ್ಯಾವಂತ ಯುವ ಸಮುದಾಯದ ಮೇಲೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಶಿವಣ್ಣ ತಿಮ್ಮಲಾಪುರ, ಕೊಟ್ಟ ಶಂಕರ್, ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಡಾ.ಮುಕುಂದಪ್ಪ, ಚಿಕ್ಕಣ್ಣ ಎಸ್, ಶ್ರೀನಿವಾಸ್, ಶಮೀಮ್ ಉನ್ನೀಸಾ, ನಾಗೇಂದ್ರಪ್ಪ, ದಾಸಪ್ಪ, ಸುನೀಲ್, ಮೂರ್ತಿ ಕೆಸ್ತೂರ್, ನಿಲಯ ಮೇಲ್ವಿಚಾರಕಿಯರಾದ ಮೇರಿ, ಉಮಾದೇವಿ, ಲಕ್ಷ್ಮೀರಂಗಯ್ಯ ಭಾಗವಹಿಸಿದ್ದರು.







