ದಾವಣಗೆರೆ: ಬ್ಯಾಂಕ್‍ಗಳಲ್ಲಿ ಹಿಂದಿ ಹೇರಿಕೆ ಖಂಡಿಸಿ ಕರವೇ ಪ್ರತಿಭಟನೆ

ದಾವಣಗೆರೆ, ಸೆ.16: ಬ್ಯಾಂಕ್‍ಗಳಲ್ಲಿ ಹಿಂದಿ ಹೇರಿಕೆ ಖಂಡಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಜಿಪಂ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಧರಣಿ ನಡೆಸಲಾಯಿತು.
ನಗರದ ಜಿಪಂ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ಹಮ್ಮಿಕೊಂಡಿದ್ದ ಜಿಲ್ಲಾ ಬ್ಯಾಂಕ್‍ಗಳ ಪ್ರಗತಿ ಪರಿಶೀಲನಾ ಸಭೆಗೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಕಾರ್ಯಕರ್ತರು, ಬ್ಯಾಂಕ್‍ಗಳ ನೇಮಕಾತಿಯಲ್ಲಿ, ವ್ಯವಹಾರದಲ್ಲಿ ಹಿಂದಿ ಹೇರಿಕೆ ವಿರುದ್ಧ ಖಂಡಿಸಿ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಎಂ.ಎಸ್. ರಾಮೇಗೌಡ, ಹಿಂದಿ ಹೇರಿಕೆ ವಿರುದ್ಧ ಕರವೇ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದು, ಕೇಂದ್ರ ಸರ್ಕಾರವು ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಹೇಳಿ, ರೈಲ್ವೆ, ಬ್ಯಾಂಕ್, ಅಂಚೆ, ಬಿಸ್ಸೆನ್ನೆಲ್ ಇತರೆ ಕೇಂದ್ರ ಸ್ವಾಮ್ಯದ ಇಲಾಖೆಗಳಲ್ಲಿ ಹಿಂದಿ ಹೇರಿ, ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.
ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮವೆಂಬ ಅರಿವಿದ್ದರೂ, ಹಿಂದಿ ಹೇರಲು ಇಲಾಖೆಗಳೂ ಕುಂಟು ನೆಪ ಹೇಳುತ್ತಿವೆ. ಬ್ಯಾಂಕ್‍ಗಳಲ್ಲಿ ವ್ಯವಹರಿಸಲು ಹೋದ ಕನ್ನಡಿಗರಿಗೆ ಕನ್ನಡದಲ್ಲಿ ಮುದ್ರಿಸದ ದಾಖಲೆ ನೀಡುತ್ತಿದ್ದು, ಇದರಿಂದ ವ್ಯವಹರಿಸಲು ಕಷ್ಟವಾಗುತ್ತಿದೆ. ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಬೇಕಿದ್ದರೆ ಮುದ್ರಿಸಲಿ. ಅದನ್ನು ಬಿಟ್ಟು ಹಿಂದಿ ಹೇರುವುದನ್ನು ಸಹಿಸೆವು ಎಂದರು.
ಹಿಂದಿ ರಾಷ್ಟ್ರಭಾಷೆಯಲ್ಲವೆಂಬುದು ಹಿಂದೆಯೇ ಸಾಬೀತಾಗಿದೆ. ಮೆಟ್ರೋದಲ್ಲೂ ಹಿಂದಿ ಹೇರಿಕೆ ವಿರುದ್ಧದ ನಡೆದ ಹೋರಾಟದಲ್ಲೇ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಲ್ಲಿ ಹಿಂದಿ ಬಳಕೆ ನಿಲ್ಲಿಸಬೇಕು. ಬ್ಯಾಂಕ್‍ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಬಸಮ್ಮ, ಖಾದರ್ ಬಾಷಾ, ಎನ್.ಟಿ. ಹನುಮಂತಪ್ಪ, ಎಂ.ವಿ. ಶಂಕರಾನಂದ, ಎನ್.ಟಿ. ಹನುಮಂತಪ್ಪ, ಪಿ.ಜೆ. ಶಾಂತಮ್ಮ, ವಿಜಯಮ್ಮ, ನೇತ್ರಾವತಿ, ದುಗ್ಗಮ್ಮ, ಲಕ್ಷ್ಮೀ, ಕಾಳಮ್ಮ, ಆರ್. ಜ್ಯೋತಿ, ಡಿ. ಮಲ್ಲಿಕಾರ್ಜುನ, ಜಿ. ರಷೀದ್ ಸಾಬ್ ಇತರರಿದ್ದರು.







