ಸೆ. 17ರಿಂದ ಭಾರತ-ಆಸ್ಟ್ರೇಲಿಯ ಏಕದಿನ ಸರಣಿ
ಚೆನೈನಲ್ಲಿ ಮೊದಲ ಏಕದಿನ ಪಂದ್ಯ

ಚೆನ್ನೈ, ಸೆ.16: ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಕ್ಕೆ ಇದೀಗ ಆಸ್ಟ್ರೇಲಿಯ ವಿರುದ್ಧ ಸವಾಲು ಎದುರಾಗಿದ್ದು, ಐದು ಪಂದ್ಯಗಳ ಸರಣಿಯ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಚೆನ್ನೈನಲ್ಲಿ ರವಿವಾರ ನಡೆಯಲಿದೆ.
ಈ ಸರಣಿಯು ಉಭಯ ತಂಡಗಳಿಗೂ ಐಸಿಸಿ ರ್ಯಾಂಕಿಂಗ್ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿ ಭಾರತದ ವಿರುದ್ಧ ಆಸ್ಟ್ರೇಲಿಯ 4-1 ಅಂತರದಲ್ಲಿ ಸರಣಿ ಜಯ ಗಳಿಸಿತ್ತು. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯ 95 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.
►ಅಗ್ರ ವೇಗಿಗಳ ಅನುಪಸ್ಥಿತಿ: ಆಸ್ಟ್ರೇಲಿಯ ಈ ಬಾರಿ ಅಗ್ರ ಇಬ್ಬರು ವೇಗದ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಭಾರತವನ್ನು ಎದುರಿಸಲಿದೆ. ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್‌ವುಡ್ ಅನುಪಸ್ಥಿತಿಯಲ್ಲಿ ಕೊಹ್ಲಿ ಪಡೆ ಹೆೆಚ್ಚಿನ ಲಾಭ ಪಡೆಯಲು ನೋಡುತ್ತಿದೆ.
►ಅಕ್ಷರ್ ಪಟೇಲ್‌ಗೆ ಗಾಯ: ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಪಟೇಲ್ ಬದಲಿಗೆ ರವೀಂದ್ರ ಜಡೇಜ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಕ್ಕೆ ಸ್ಪಿನ್ನರ್‌ಗಳಾದ ಜಡೇಜ, ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಸವಾಲು ಎದುರಾಗಲಿದೆ.
►ಚೆನ್ನೈನಲ್ಲಿ 3 ದಶಕಗಳ ಬಳಿಕ ಮುಖಾಮುಖಿ: ಉಭಯ ತಂಡಗಳು ಚೆನ್ನೈನಲ್ಲಿ ಮೂರು ದಶಕಗಳ ಬಳಿಕ ಮುಖಾಮುಖಿಯಾಗಲಿವೆೆ. ಚೆನ್ನೈನ ಕ್ರೀಡಾಂಗಣದಲ್ಲಿ 1987ರಲ್ಲಿ ರಿಲಯನ್ಸ್ ಕಪ್‌ನ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯ 1 ರನ್ ಅಂತರದಲ್ಲಿ ರೋಚಕ ಜಯ ಗಳಿಸಿತ್ತು. 2013ರಲ್ಲಿ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 3-2 ಅಂತರದಲ್ಲಿ ಸರಣಿ ಜಯ ಗಳಿಸಿತ್ತು. 2 ಪಂದ್ಯ ರದ್ದಾಗಿತ್ತು. ಸ್ಟೀವ್ ಸ್ಮಿತ್ ಆಗ ಆಸ್ಟ್ರೇಲಿಯ ತಂಡದಲ್ಲಿರಲಿಲ್ಲ. ಈಗ ಅವರು ತಂಡವನ್ನು ನಾಯಕರಾಗಿ ಮುನ್ನಡೆಸುತ್ತಿದ್ದಾರೆ.
ಚೆನ್ನೈನ ಚಿಪಾಕ್ ಸ್ಟೇಡಿಯಂ ಬ್ಯಾಟ್ಸ್‌ಮನ್ ಸ್ನೇಹಿಯಾಗಿದೆ. ಉಪನಾಯಕ ರೋಹಿತ್ ಶರ್ಮ ಅವರ ಪ್ರಕಾರ ಈ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಅವರು ಆಸ್ಟ್ರೇಲಿಯದ ವಿರುದ್ಧ 2013ರಲ್ಲಿ ಮೊದಲ ದ್ವಿಶತಕ ದಾಖಲಿಸಿದ್ದರು. ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
►ರಾಹುಲ್ ಚಿಂತೆ: ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮ ಅವರು ಯಾವುದೇ ದಾಳಿಯನ್ನು ಪುಡಿಪುಡಿ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ರೋಹಿತ್ ಅವರು ಅಜಿಂಕ್ಯ ರಹಾನೆ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ರಹಾನೆ ಆರಂಭಿಕ ಬ್ಯಾಟ್ಸ್ ಮನ್ ಸ್ಥಾನವನ್ನು ತುಂಬಲಿದ್ದಾರೆ. ನಂ.4 ಸ್ಥಾನದಲ್ಲಿ ಲೋಕೇಶ್ ರಾಹುಲ್ ಅವರ ಪ್ರದರ್ಶನ ಚೆನ್ನಾಗಿಲ್ಲ. ಈ ಕಾರಣದಿಂದಾಗಿ ಅವರು ತನ್ನ ರಣಜಿ ತಂಡದ ಸಹ ಆಟಗಾರ ಮನೀಷ್ ಪಾಂಡೆ ಜೊತೆ ಸ್ಪರ್ಧೆ ಎದುರಿಸುವಂತಾಗಿದೆ.
ಮಾಜಿ ನಾಯಕ ಎಂ.ಎಸ್. ಧೋನಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಲಂಕಾ ವಿರುದ್ಧ ಎರಡು ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದರು. ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯ ವಿರುದ್ಧ ಚೆನ್ನಾಗಿ ಆಡುವ ನಿರೀಕ್ಷೆ ಇದೆ. ಮುಹಮ್ಮದ್ ಶಮಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ. ತಂಡಕ್ಕೆ ವಾಪಸಾಗಿದ್ದರೂ, ಇದೀಗ ಅವರಿಗೆ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಗುವ ವಿಚಾರ ದೃಢಪಟ್ಟಿಲ್ಲ.
►ಅನನುಭವಿ ಸ್ಪಿನ್ನರ್‌ಗಳು: ಅನುಭವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಭಾರತದ ಸ್ಪಿನ್ ವಿಭಾಗ ಅಕ್ಷರ್ ಪಟೇಲ್, ಯುಜುವೇಂದ್ರ ಚಾಹಲ್ ಮತ್ತು ಕುಲ್‌ದೀಪ್ ಯಾದವ್ ಅವರನ್ನು ಅವಲಂಭಿಸಿದೆ. ಇವರು ಲಂಕಾದ ವಿರುದ್ಧ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದರು. ಆದರೆ ಆಸ್ಟ್ರೇಲಿಯದ ವಿರುದ್ಧ ಸವಾಲು ಎದುರಿಸುವಂತಾಗಿದೆ.
►ಐಪಿಎಲ್ ನೆರವು:ಭಾರತದಲ್ಲಿ ಈಗಾಗಲೇ ಆಡಿರುವ ಅನುಭವ ಹೊಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಸರಣಿಯಲ್ಲಿ ಮಿಂಚುವುದನ್ನು ನಿರೀಕ್ಷಿಸಲಾಗಿದೆ.
ಆಸ್ಟ್ರೇಲಿಯ ತಂಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಲ್‌ರೌಂಡರ್‌ಗಳಿದ್ದಾರೆ.ಜೇಮ್ಸ್ ಫಾಕ್ನರ್, ಮಾರ್ಕಸ್ ಸ್ಟೋನಿಸ್, ನಥಾನ್ ಕೌಲ್ಟರ್ ನೀಲ್ ಅವರು ಭಾರತದಲ್ಲಿ ಐಪಿಎಲ್‌ನಲ್ಲಿ ಆಡುವ ಮೂಲಕ ಭಾರತದ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ.
►ಪ್ರತೀಕಾರ: ನಾಯಕ ಸ್ಮಿತ್ 2013ರ ಸರಣಿ ಸೋಲಿಗೆ ಪ್ರತೀಕಾರ ತೀರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ. ಆದರೆ ಭಾರತದ ನೆಲದಲ್ಲಿ ಭಾರತವನ್ನು ಕಟ್ಟಿ ಹಾಕುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಸಾಧ್ಯ ಎನ್ನುವ ಭಯ ಅವರನ್ನು ಆವರಿಸಿದೆ. ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ ಗಾಯದ ಕಾರಣದಿಂದಾಗಿ ತಂಡದಿಂದ ದೂರ ಉಳಿದಿದ್ದಾರೆ.
►ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಎಂ.ಎಸ್ ಧೋನಿ(ವಿಕೆಟ್ ಕೀಪರ್), ರವೀಂದ್ರ ಜಡೇಜ, ಭುವನೇಶ್ವರ ಕುಮಾರ್,ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮುಹಮ್ಮದ್ ಶಮಿ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್.
►ಆಸ್ಟ್ರೇಲಿಯ ತಂಡ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಹಿಲ್ಟನ್ ಕಾರ್ಟ್‌ವೈಟ್, ಟ್ರಾವಿಸ್ ಹೆಡ್,ಗ್ಲೆನ್ ಮ್ಯಾಕ್ಸ್‌ವೆಲ್,ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜೇಮ್ಸ್ ಫಾಕ್ನರ್,ನಥಾನ್ ಕೌಲ್ಟರ್ ನೀಲ್, ಪ್ಯಾಟ್ ಕಮಿನ್ಸ್,ಕೇನ್ ರಿಚರ್ಡ್ಸನ್.ಆ್ಯಸ್ಟನ್ ಅಗರ್, ಆ್ಯಡಮ್ ಝಾಂಪ, ಪೀಟರ್ ಹ್ಯಾಂಡ್ಸ್‌ಕಂಬ್.
ಪಂದ್ಯದ ಸಮಯ: ಮಧ್ಯಾಹ್ನ 1.30 ಗಂಟೆಗೆ







