ರೈಲಿನಲ್ಲಿ ಸುಖ ನಿದ್ರೆಯ ಪ್ರಯಾಣ ಮಾಡುವವರು ಈ ಸುದ್ದಿಯನ್ನು ಓದಿ
ನಿಮಗೆ ಸಂತಸ ತರುವ ಸುದ್ದಿಯಲ್ಲ ಇದು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ.17: ರೈಲಿನಲ್ಲಿ ಮೀಸಲು ಬೋಗಿಗಳಲ್ಲಿ ಪ್ರಯಾಣದ ಬಹುತೇಕ ಸಂದರ್ಭ ಮಲಗಿಯೇ ಇರುವ ಪ್ರಯಾಣಿಕರಿಗೆ ಇದೀಗ ಕಹಿ ಸುದ್ದಿಯೊಂದಿದೆ. ಇನ್ನು ರೈಲ್ವೇಯಲ್ಲಿ ಮೀಸಲು ಬೋಗಿಯ ಪ್ರಯಾಣಿಕರಿಗೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಲಗುವ ಸಮಯ ಎಂದು ರೈಲ್ವೇ ಇಲಾಖೆ ನಿಗದಿಗೊಳಿಸಿದೆ.
ಮೀಸಲು ಬೋಗಿಗಳಲ್ಲಿ ಮೇಲಿನ ಮತ್ತು ಮಧ್ಯದ ‘ಬರ್ತ್’ಗಳನ್ನು ಮೀಸಲಿರಿಸಿದ ಪ್ರಯಾಣಿಕರು ಇಡೀ ದಿನ ಮಲಗಿಯೇ ಇದ್ದರೆ ಕೆಳಗಿನ ‘ಬರ್ತ್’ನಲ್ಲಿ ಕುಳಿತುಕೊಳ್ಳಬೇಕಾದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ . ಅಲ್ಲದೆ ರೈಲು ಹತ್ತಿದೊಡನೆ ಕೆಳಗಿನ ‘ಬರ್ತ್’ನ ಪ್ರಯಾಣಿಕರು ಮಲಗಿಬಿಟ್ಟರೆ, ಉಳಿದ ಎರಡು ‘ಬರ್ತ್’ನಲ್ಲಿ ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ರೈಲ್ವೇ ಮಂಡಳಿ ಈ ಆದೇಶದ ಸರ್ಕ್ಯುಲರ್ ಹೊರಡಿಸಿದೆ. ಇದುವರೆಗೆ ಅಧಿಕೃತ ನಿದ್ದೆಯ ಸಮಯ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆ ಎಂದಾಗಿತ್ತು.
ಮೀಸಲು ಬೋಗಿಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿದ್ದೆಗೆ ಅವಕಾಶ ಹಾಗೂ ಉಳಿದ ಪ್ರಯಾಣಾವಧಿಯಲ್ಲಿ ಕುಳಿತು ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಆಗಸ್ಟ್ 31ರ ದಿನಾಂಕ ಹೊಂದಿರುವ ಸರ್ಕ್ಯುಲರ್ನಲ್ಲಿ ತಿಳಿಸಲಾಗಿದೆ. ಆದರೆ ಕೆಲವೊಂದು ಪ್ರಯಾಣಿಕರಿಗೆ ವಿನಾಯಿತಿ ನೀಡಲಾಗಿದೆ. ಅಸ್ವಸ್ಥರಾಗಿರುವವರು, ವಿಕಲಾಂಗರು ಹಾಗೂ ಗರ್ಭಿಣಿಯರು ಈ ನಿಗದಿತ ಸಮಯ ಮೀರಿಯೂ ನಿದ್ದೆಮಾಡಲು ಅವಕಾಶವಿದೆ ಎಂದು ಸರ್ಕ್ಯುಲರ್ನಲ್ಲಿ ತಿಳಿಸಲಾಗಿದೆ. ಸೈಡ್ ಬರ್ತ್ ಕುರಿತೂ ರೈಲ್ವೇ ಮಂಡಳಿ ಸ್ಪಷ್ಟಪಡಿಸಿದೆ. ಮೇಲಿನ ಸೈಡ್ಬರ್ತ್ ಟಿಕೆಟ್ ಕಾಯ್ದಿರಿಸಿದ ವ್ಯಕ್ತಿ ಕೆಳಗಿನ ಬರ್ತ್ನಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರ ಅವಧಿಯಲ್ಲಿ ಕುಳಿತುಕೊಳ್ಳುವ ಹಕ್ಕು ಸಾಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬಹುತೇಕ ಸಂದರ್ಭ ಈ ರೀತಿಯ ವಿವಾದ ಹುಟ್ಟುತ್ತಿರುವ ಕಾರಣ ಈ ಸರ್ಕ್ಯುಲರ್ ಜಾರಿಗೊಳಿಸಲಾಗಿದ್ದು ಟಿಕೆಟ್ ಪರೀಕ್ಷಕರಿಗೆ ವಿವಾದ ಬಗೆಹರಿಸಲು ನೆರವಾಗಲಿದೆ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.







