ಡಾ.ಜಿ.ಪರಮೇಶ್ವರ್ ವೈಫಲ್ಯದಿಂದ ಗೌರಿ ಲಂಕೇಶ್ ಹತ್ಯೆ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆರೋಪ

ಬೆಂಗಳೂರು, ಸೆ. 17: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಅಂದಿನ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಸೂಕ್ತ ತನಿಖೆ ನಡೆಸಲು ವಿಫಲವಾದ ಕಾರಣದಿಂದಲೇ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದಿದೆ ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಚಾರವಾದಿಗಳ ವೇದಿಕೆ ಕರ್ನಾಟಕ ಆಯೋಜಿಸಿದ್ದ ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್ ರಾಮಸ್ವಾಮಿ ಜಯಂತಿ ಅಂಗವಾಗಿ ಪ್ರಸ್ತುತ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್(ಮರಣೋತ್ತರ) ಹಾಗೂ ದಲಿತ ಚಳವಳಿಗಾರ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಪ್ರದಾನಿಸಿ ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆ ವಿಚಾರವಾದಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಾಗ ಸೂಕ್ತ ತನಿಖೆ ನಡೆಸುವಲ್ಲಿ ಅಂದಿನ ಗೃಹ ಸಚಿವ ಜಿ.ಪರಮೇಶ್ವರ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅಲ್ಲದೆ, ಅವರು ಮುಖ್ಯಮಂತ್ರಿಯಾಗಲು ನಡೆಸಿದ ಹೋರಾಟದಲ್ಲಿ ಶೇಕಡ 1 ರಷ್ಟು ಕಳಾಜಿ ತನಿಖೆ ಮೇಲೆ ಇದ್ದಿದರೆ, ನಾವಿಂದು ಗೌರಿಲಂಕೇಶ್ ಅವರನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ನುಡಿದರು.
ರಾಜಕೀಯ ಹತ್ಯೆ: ತಮ್ಮ ಪತ್ರಿಕೆಯ ಮೂಲಕ ಕೋಮುವಾದದ ವಿರುದ್ಧ ಹೋರಾಡಿದ ಗೌರಿ ಲಂಕೇಶ್‌ರನ್ನು ಹತ್ಯೆಗೈದಿರುವುದು ರಾಜಕೀಯ ಪ್ರೇರಿತ.ಅಲ್ಲದೆ, ಅವರ ತಂದೆ ಪಿ.ಲಂಕೇಶ್‌ರ ವೈಚಾರಿಕತೆಯನ್ನು ಗೌರಿ ಮುಂದುವರೆಸಿಕೊಂಡು ಸಾಗಿದ್ದರು ಎಂದು ವೀರಭದ್ರಚನ್ನಮಲ್ಲ ಸ್ವಾಮೀಜಿ ಸ್ಮರಿಸಿದರು.
ನ್ಯಾಯ ಸಿಗಲ್ಲ: ಈಗಿನ ವ್ಯವಸ್ಥೆಯಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ಅನ್ಯಾಯವಾದ ರೀತಿಯಲ್ಲೇ ಗೌರಿ ಲಂಕೇಶ್ ಅವರಿಗೂ ಅನ್ಯಾಯವಾಗಲಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತ ಅಧಿಕಾರ ಬಳಸಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವುದು ಸಂತಸದ ಸಂಗತಿ ಎಂದರು.
ಸನಾತನ ಸಂಸ್ಕೃತಿ: ‘ಸನಾತನ ಸಂಸ್ಕೃತಿಯಲ್ಲಿ ಹಿಂಸೆಯ ಎರಡು ಮಾದರಿಗಳಿವೆ, ಒಂದು ವಾಧ ಮತ್ತೊಂದು ಬಲಿ. ಈ ಬಲಿ ಸಂಸ್ಕೃತಿ ತನ್ನ ಹಿತಶಕ್ತಿಗಾಗಿ ತನ್ನವರನ್ನೆ ಅಂತ್ಯಗೊಳಿಸುವುದು. ಮತ್ತೊಂದು ವಾಧ ಸಂಸ್ಕೃತಿಯೂ ತನ್ನ ಹಿತಶಕ್ತಿಗಾಗಿ ಅನ್ಯರಿಗೆ ಬಲಿ ಕೊಡುವುದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಪತ್ರಕರ್ತ ಅಗ್ನಿಶ್ರೀಧರ್ ಮಾತನಾಡಿ, ಗೌರಿ ಲಂಕೇಶ್ ಹತ್ಯೆ ಹಿಂದೆ ವೇದಿಕರ ಕೈವಾಡ ಇದೆ. ಅವರ ವಿಚಾರಗಳಿಗಾಗಿಯೇ ಕೊಲೆಯಾಗಿದೆ ವಿನಃ ಇದರಲ್ಲಿ ಬೇರೆ ಕಾರಣ ಇಲ್ಲ.ಈ ಮೊದಲೇ ಹೇಳಿದ್ದೇ, ನಿಮ್ಮ ವಿಚಾರಗಳಿನ್ನಿಟ್ಟುಕೊಂಡು ಚರ್ಚೆಗೆ ಬನ್ನಿ ಎಂದು.ಆದರೆ, ಪೇಜಾವರ ಶ್ರೀ ಸೇರಿ ಯಾರು ಮುಂದಾಗಲಿಲ್ಲ ಎಂದರು.
ಕಾಯ್ದೆ ತನ್ನಿ: ಸ್ವಚ್ಛ ಭಾರತ ಹೆಸರಿನಲ್ಲಿ ಸ್ವಚ್ಛತೆ ಕಾಪಾಡಿ ಎಂದು ಹೇಳುತ್ತಾರೆ. ಆದರೆ, ಇದರ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ತಮ್ಮ ಮನೆಗಳ ಶೌಚಾಲಯ ಕಡ್ಡಾಯವಾಗಿ ತಾವೇ ಸ್ವಚ್ಛಗೊಳಿಸಬೇಕೆನ್ನುವ ಕಾಯ್ದೆ ತರಲು ಕೇಂದ್ರ ಸರಕಾರ ಮುಂದಾಗಲಿ ಎಂದು ಪ್ರಗತಿಪರ ಚಿಂತಕ ಲೋಲಾಕ್ಷ ಸವಾಲು ಹಾಕಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ, ದಲಿತ ಚಳವಳಿಗಾರ ಕೋಟಿಗಾನಹಳ್ಳಿ ರಾಮಯ್ಯ, ಬೆಂಗಳೂರು ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕಿ ಡಾ.ಸುಮಿತ್ರ, ವಿವೇಕ ಪ್ರಧಾನ ಸಂಚಾಲಕರಾದ ಎಂ.ವೆಂಕಟಸ್ವಾಮಿ, ವೈ.ಮರಿಸ್ವಾಮಿ, ದಲಿತ ಮುಖಂಡರಾದ ಅಣ್ಣಯ್ಯ, ಲಯನ್ ಬಾಲಕೃಷ್ಣ, ಮಣಿವಣ್ಣನ್ ಸೇರಿ ಪ್ರಮುಖರು ಹಾಜರಿದ್ದರು.
‘ನಾನು ಈ ದೇಶದ ಪ್ರಧಾನಿಯಾಗಿದ್ದರೆ, ಗೌರಿ ಲಂಕೇಶ್ ಎನ್ನದೇ, ಒಬ್ಬ ಹೆಣ್ಣು ಮಗಳ ಕೊಲೆಯಾಗಿದೆ ಎಂದು ಪಾರ್ಲಿಮೆಂಟ್ ಮೇಲಿನ ಧ್ವಜವನ್ನು ಅರ್ಧಕ್ಕೆ ಕೆಳಗಿಳಿಸಿ ಗೌರವ ಸಲ್ಲಿಸುತ್ತಿದ್ದೇ.’-ಕೋಟಿಗಾನಹಳ್ಳಿ ರಾಮಯ್ಯ, ಹಿರಿಯ ದಲಿತ ಚಳವಳಿಗಾರ
‘3ನೆ ಗುಂಡು ನನಗೆ’
‘ಕಲಬುರ್ಗಿ ಅವರ ಹತ್ಯೆಗೂ ಹದಿನೈದು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕೆಲವರು ಪತ್ರಿಕಾಗೋಷ್ಠಿ ನಡೆಸಿ, ನಾಡಿನ ಐದು ಜನ ವಿಚಾರವಾದಿಗಳನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಬಳಿಕ ಎಂ.ಎಂ.ಕಲಬುರ್ಗಿ ಹತ್ಯೆ ನಡೆಯಿತು, ಇದೀಗ ಗೌರಿ ಲಂಕೇಶ್ ನಡೆದಿದೆ. ಮೂರನೇ ಗುಂಡು ನನ್ನ ಕಡೆ ಬರಲಿದೆ. ಆದರೆ, ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.’
-ವೀರಭದ್ರ ಚನ್ನಮಲ್ಲ ಸ್ವಾಮಿ, ನಿಡುಮಾಮಿಡಿ ಮಠ







