ವಿಶ್ವಕರ್ಮ ಜನಾಂಗಕ್ಕೆ ಮೀಸಲಾತಿ ಅಗತ್ಯ: ಎಚ್.ಡಿ.ದೇವೇಗೌಡ

ಬೆಂಗಳೂರು, ಸೆ.17:ವಿಶ್ವಕರ್ಮ ಜನಾಂಗದ ಜನರು ಕೆಲಸವಿಲ್ಲದೆ, ಹಳ್ಳಿಯಿಂದ ನಗರಕ್ಕೆ ವಲಸೆ ಬಂದು ನೆಲೆಸಿದ್ದಾರೆ. ನಗರ ಪ್ರದೇಶದಲ್ಲಿ ಚಿನ್ನಾಭರಣ ತಯಾರಿಕೆಯಲ್ಲಿ ತೊಡಗಿದ್ದಾರೆ. ಪ್ರವರ್ಗ ‘2ಎ’ಗೆ ವರ್ಗೀಕರಣ ಮಾಡಿ ಸರಕಾರಿ, ರಾಜಕೀಯ, ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ನಿರ್ಧರಿಸಿದ್ದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ರವಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ(ಜೆ.ಪಿ.ಭವನ) ಯಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವಕರ್ಮ ಜನಾಂಗದಲ್ಲಿ ಒಳಮೀಸಲಾತಿ ತರಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರವು ನಿರ್ಧರಿಸಿತ್ತು. ಆದರೆ, ಕೆಲವರು ವಿರೋಧ ಮಾಡಿದ್ದರಿಂದ ಒಳ ಮೀಸಲಾತಿ ಜಾರಿಗೆ ತರಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಳಮೀಸಲಾತಿಯನ್ನು ಹೇಗೆ ತರಬೇಕು, ಅವಕಾಶ ವಂಚಿತರಿಗೆ ಮೀಸಲಾತಿ ತರುವುದು ಹೇಗೆ ಎಂಬುದು ನನಗೆ ಗೊತ್ತಿದೆ. ವಿಶ್ವಕರ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಾಡಿ, ಆರ್ಥಿಕ ನೆರವು ಒದಗಿಸುವುದು, ಸಮುದಾಯದ ಯುವಕರಿಗೆ ಸ್ವ ಉದ್ಯೋಗ ಒದಗಿಸುವ ಆಲೋಚನೆಯಿದೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರಿಸುತ್ತೇವೆ ಎಂದು ಹೇಳಿದರು.
ವಿಶ್ವಕರ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಈಗಿನ ರಾಜ್ಯ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ, ಪರಿಶಿಷ್ಟ ಪಂಗಡಕ್ಕೆ ಈ ಜನಾಂಗವನ್ನು ಸೇರಿಸಲು ಸಾಧ್ಯವಿಲ್ಲ. ಕೇವಲ ರಾಜಕೀಯಕಾರಣಗಳಿಗಾಗಿ ಮಾತ್ರ ಈ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕರ್ನಾಟಕದ ಕಡೆ ರಾಷ್ಟ್ರೀಯ ಪಕ್ಷಗಳು ಹೆಚ್ಚು ಒತ್ತು ನೀಡುತ್ತಿವೆ. ಎಲ್ಲ ಜಿಲ್ಲೆಗಳಲ್ಲೂ ಜೆಡಿಎಸ್ ಶಾಸಕರು ಇರುತ್ತಾರೆ. ಈಗಾಗಲೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.
ಈಗಾಗಲೇ ಬೀದರ್ ಪ್ರವಾಸವನ್ನು ಮುಗಿಸಿದ್ದೇನೆ. ಮುಂದೆ ಬಳ್ಳಾರಿ ಭಾಗದಲ್ಲಿ ಪ್ರವಾಸ ಕೈಗೊಳ್ಳಲಾಗುವುದು. ಚುನಾವಣೆ ಗೆಲ್ಲಲೂ ಏನು ತಂತ್ರಗಾರಿಕೆ ಬೇಕೊ ಅದೆಲ್ಲ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







