ಸಾರ್ವಜನಿಕ ಸಾರಿಗೆ ಪ್ರಯಾಣದಿಂದ ಸಂಚಾರ ಸಮಸ್ಯೆಗೆ ಮುಕ್ತಿ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಸೆ.17: ದೇಶಾದ್ಯಂತ ಸಾರ್ವಜನಿಕ ಸಾರಿಗೆ ವಾಹನಗಳ ಪ್ರಯಾಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಬಹುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರವಿವಾರ ನಗರದ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ಆಯೋಜಿಸಿದ್ದ ಎಸೆಸ್ಸೆಲ್ಸಿಯಿಂದ ಉನ್ನತ ಶಿಕ್ಷಣ ಮಟ್ಟದವರೆಗೂ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರು ಉದ್ಘಾಟಿಸಿ ಅವರು ಮಾತನಾಡಿದರು.
ಮೆಟ್ರೋ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಿದರೂ ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಸಾರಿಗೆ ವ್ಯವಸ್ಥೆಯಲ್ಲಿ ಬಸ್ ಸಂಚಾರಕ್ಕೆ ದೇಶಾದ್ಯಂತ ಒತ್ತು ನೀಡಿದರೆ ಈ ಸಮಸ್ಯೆ ಬಗೆಹರಿಸಬಹುದೆಂದು ಹೇಳಿದರು.
ರಾಜ್ಯದ ಸಾರಿಗೆ ಸಂಸ್ಥೆ ಬಗ್ಗೆ ಆರೋಪ, ಟೀಕೆ ಮಾಡುವವರು ಮೊದಲು ಹೊರ ರಾಜ್ಯದ ಸಾರಿಗೆ ವ್ಯವಸ್ಥೆ ನೋಡಿಕೊಳ್ಳಬೇಕು. ಅಲ್ಲದೆ, ನಮ್ಮ ಕೆಎಸ್ಸಾರ್ಟಿಸಿ, ಬಿಎಂಟಿಸಿ ದೇಶಕ್ಕೆ ಮಾದರಿಯಾಗಿದೆ. ಹಲವು ಪ್ರಶಸ್ತಿಗಳು ಈ ಸಂಸ್ಥೆಗೆ ಸಂದಿವೆ ಎಂದು ತಿಳಿಸಿದರು.
ಈ ಇಲಾಖೆ ಸಚಿವನಾಗಿದ್ದಾಗ ಯಾವುದೇ ದೂರು ಇಲ್ಲದೆ ಕಾರ್ಯ ನಿರ್ವಹಿಸಿದ್ದು, ನಲ್ವತ್ತು ಹೊಸ ಘಟಕಗಳು, 70 ಹೊಸ ಬಸ್ ನಿಲ್ದಾಣ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮ ರೂಪಿಸಿ ಯಶಸ್ವಿಗೊಳಿಸಲಾಗಿದೆ ಎಂದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ಸಾಧಕರಾಗಬೇಕು ಎಂದು ಕರೆ ನೀಡಿದರು.
ಕೆಎಸ್ಸಾರ್ಟಿಸಿ ಅಧ್ಯಕ್ಷ ಗೋವಿಂದ ಪೂಜಾರಿ ಮಾತನಾಡಿ, ಇಂದು ಪ್ರತಿಯೊಬ್ಬರು ಆಸ್ತಿ ಮಾಡುವುದೇ ದೊಡ್ಡದು ಎಂದುಕೊಂಡಿದ್ದಾರೆ. ಅದು ನಿಜಕ್ಕೂ ತಪ್ಪು ಕಲ್ಪನೆ, ನಿಜವಾದ ಆಸ್ತಿ ಎಂದರೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದೇ ಆಗಿದೆ, ಪೋಷಕರು ಈಗಲಾದರೂ ಎಚ್ಚೆತ್ತುಕೊಂಡು ಹೆಣ್ಣು ಮಕ್ಕಳಿಗೆ ಕಾಲೇಜು ಮಟ್ಟದಲ್ಲಿ ಶಿಕ್ಷಣ ಕೊಡಿಸುತ್ತಿರುವುದು ಪ್ರಶಂಸನೀಯ. ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲೂ ನಡೆಯಬೇಕು, ಹಾಗಾದಾಗ ವಿದ್ಯಾರ್ಥಿಗಳು ಸಹ ಹೆಚ್ಚಿನ ಅಂಕ ಗಳಿಸಲು ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ಎಸ್.ಆರ್.ಉಮಾಶಂಕರ್, ಎಐಟಿಯುಸಿ ಅಧ್ಯಕ್ಷ ಎಚ್.ವಿ.ಅನಂತ್ ಸುಬ್ಬರಾವ್, ಪ್ರೊ.ಶರ್ಮಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.







