ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಸಮಯ ಬಂದಿದೆ: ಅಠಾವಳೆ

ಅಹ್ಮದಾಬಾದ್,ಸೆ.17: ಪಾಕಿಸ್ತಾನವು ತನ್ನ ನೆಲದಲ್ಲಿ ಭೀತಿವಾದಕ್ಕೆ ಆಶ್ರಯ ನೀಡಿದೆ ಮತ್ತು ಕಾಶ್ಮೀರದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ ಎಂದು ರವಿವಾರ ಇಲ್ಲಿ ಆರೋಪಿಸಿದ ಕೇಂದ್ರದ ಸಹಾಯಕ ಸಾಮಾಜಿಕ ನ್ಯಾಯ ಸಚಿವ ರಾಮದಾಸ ಅಠಾವಳೆ ಅವರು, ಆ ರಾಷ್ಟ್ರದ ವಿರುದ್ಧ ಯುದ್ಧವನ್ನು ಸಾರಲು ಸಮಯವೀಗ ಬಂದಿದೆ ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾಧನೆಗಳ ಕುರಿತು ಸುದ್ದಿಗೋಷ್ಠಿ ಯಲ್ಲಿ ಮಾತನಾಡುತ್ತಿದ್ದ ಅವರು, ‘‘ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆಯುವ ಶೇ.99.99ರಷ್ಟು ಸಾಧ್ಯತೆಯಿತ್ತು. ನಾವಿನ್ನೂ 1962ರ ಭಾರತವಾಗಿದ್ದೇವೆ ಎಂದು ನಂಬಿದ್ದ ಚೀನಾ ನಮ್ಮನ್ನು ಹಗುರವಾಗಿ ಪರಿಗಣಿಸಿತ್ತು. ಆದರೆ ನಾವು 2017ರ ಭಾರತವಾಗಿದ್ದೇವೆ ಎನ್ನುವುದನ್ನು ಅದು ಶೀಘ್ರ ಅರ್ಥ ಮಾಡಿಕೊಂಡಿತ್ತು ಮತ್ತು ಯುದ್ಧದ ಸಾಧ್ಯತೆಯು ತಪ್ಪಿದೆ. ಆದರೆ ಪಾಕಿಸ್ತಾನದೊಂದಿಗೆ ಯುದ್ಧವನ್ನು ನಿವಾರಿಸುವಂತಿಲ್ಲ. ಆ ರಾಷ್ಟ್ರದ ವಿರುದ್ಧ ಯುದ್ಧವನ್ನು ಸಾರಬೇಕಾದ ತುರ್ತು ಅಗತ್ಯವಿದೆ’’ ಎಂದು ಹೇಳಿದರು.
ಪಾಕ್ ನೆಲದಲ್ಲಿ ಭಯೋತ್ಪಾದನೆಯು ಹುಲುಸಾಗಿ ಬೆಳೆಯುತ್ತಿರುವುದನ್ನು ಖಂಡಿಸಿ ಇತ್ತೀಚಿಗೆ ಭಾರತ ಮತ್ತು ಜಪಾನ್ ಜಂಟಿ ಹೇಳಿಕೆಯನ್ನು ನೀಡಿವೆ. ಪಾಕಿಸ್ತಾನದ ಚಟುವಟಿಕೆಗಳನ್ನು ಗಮನಿಸಿ ಅಮೆರಿಕ ಕೂಡ ಅದರ ಕುರಿತು ತನ್ನ ನಿಲುವನ್ನು ಬಿಗಿಗೊಳಿಸಿದೆ ಎಂದ ಅಠಾವಳೆ, ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮತ್ತು ತನ್ನ ನೆಲದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಪೋಷಿಸುವ ಬದಲು ತನ್ನ ಆರ್ಥಿಕತೆಯನ್ನು ಉತ್ತಮಗೊಳಿಸಿಕೊಳ್ಳಲು ಭಾರತದೊಂದಿಗೆ ವಾಣಿಜ್ಯ ಒಪ್ಪಂದಗಳಲ್ಲಿ ತೊಡಗಿಕೊಳ್ಳ ಬೇಕು. ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಲು ಇದು ಸಕಾಲವಾಗಿದೆ ಎಂದು ತಾನು ಭಾವಿಸಿದ್ದೇನೆ ಎಂದರು.
ದೇಶದ ಪ್ರಥಮ ಮಹಿಳಾ ರಕ್ಷಣಾ ಸಚಿವೆಯನ್ನಾಗಿ ನಿರ್ಮಲಾ ಸೀತಾರಾಮನ್ ನೇಮಕದ ನಿರ್ಧಾರವನ್ನು ಪ್ರಶಂಸಿಸಿದ ಅವರು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೆಂದೇ ಸೀತಾರಾಮನ್ ಅವರನ್ನು ನೂತನ ರಕ್ಷಣಾ ಸಚಿವೆಯನ್ನಾಗಿ ಮಾಡಲಾಗಿದೆ. ಪಾಕಿಸ್ತಾನಕ್ಕೆ ಒಳ್ಳೆಯ ಪಾಠ ಕಲಿಸಲು ಮಹಿಳೆಯಿಂದ ಮಾತ್ರ ಸಾಧ್ಯ ಎಂದರು.







