ಪ್ರಧಾನಿ ಜನ್ಮದಿನದ ಬದಲು ಕೆಪಿಸಿಸಿ ರೈತ ವಿಭಾಗದಿಂದ ರೈತ ವಿರೋಧಿ ದಿನಾಚರಣೆ

ಬೆಂಗಳೂರು, ಸೆ. 17: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ 67ನೆ ಜನ್ಮದಿನ ಆಚರಣೆ ಬದಲಾಗಿ, ರೈತ ವಿರೋಧಿ ದಿನಾಚರಣೆ ಆಚರಿಸುವ ಮೂಲಕ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ವಿಭಾಗದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ನಗರದ ಮೌರ್ಯ ವೃತ್ತದಲ್ಲಿ ನೂರಾರು ಕೆಪಿಸಿಸಿ ರೈತ ವಿಭಾಗದ ನೂರಾರು ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ ಬದಲಾಗಿ, ರೈತ ವಿರೋಧಿ ದಿನಾಚರಣೆ ಆಚರಿಸಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿರುವ ರೈತರ ಸಾಲವನ್ನು ಈ ಕೂಡಲೇ ಕೇಂದ್ರ ಸರಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಿ: ಇದಕ್ಕೂ ಮೊದಲು ಧರಣಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಿಸಾನ್ ಖೇತ್ ಮಜ್ದೂರ್ ವಿಭಾಗದ ಅಧ್ಯಕ್ಷ ಸಚಿನ್ ಮೀಗಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಂಸದರು ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭಾ ಕೋರುವ ಬದಲು, ರೈತರ ಸಾಲ ಮನ್ನಾಕ್ಕಾಗಿ ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಬೇಕೆಂದರು.
ರಾಜ್ಯದಲ್ಲಿ ಭೀರಕ ಬರ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬದುಕಿನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ 21 ಲಕ್ಷ ರೈತರ ಸಹಕಾರ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿದೆ. ಆದರೆ, ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಲ್ಲ. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.







