ಸರ್ದಾರ್ ಸರೋವರ್ ಅಣೆಕಟ್ಟು ವಿರುದ್ಧ ನೀರಲ್ಲಿ ಬರಿಗಾಲಲ್ಲಿ ನಿಂತು ಪ್ರತಿಭಟನೆ

ಮೇಧಾ ಪಾಟ್ಕರ್
ಬರ್ವಾನಿ (ಮಧ್ಯಪ್ರದೇಶ), ಸೆ. 17: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ರವಿವಾರ ಸರ್ದಾರ್ ಸರೋವರ್ ಅಣೆಕಟ್ಟು ಉದ್ಘಾಟಿಸಿದ್ದಾರೆ. ಆದರೆ, ಮೈಲುಗಟ್ಟಲೆ ದೂರದ ಮಧ್ಯಪ್ರದೇಶದಲ್ಲಿ ಶುಕ್ರವಾರ ಸಾವಿರಾರು ಪ್ರತಿಭಟನಕಾರರು ಬರಿಗಾಲಲ್ಲಿ ನೀರಲ್ಲೇ ನಿಂತು ಜಲಸತ್ಯಾಗ್ರಹ ಆರಂಭಿಸಿದ್ದಾರೆ. ಪ್ರತಿಭಟನೆ ನೇತ್ವತ್ವ ವಹಿಸಿದ್ದ ನರ್ಮದಾ ಬಚಾವೊ ಆಂದೋಲನದ ಸ್ಥಾಪಕಿ ಮೇಧಾ ಪಾಟ್ಕರ್, ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚುವುದರಿಂದ ಸಮೀಪದ ಪ್ರದೇಶಗಳು ಮುಳುಗಡೆಯಾಗಿ 40,000 ಕುಟುಂಬಗಳು ನಿರ್ವಸಿತರಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ನೀರಿನ ಮಟ್ಟ ಕ್ರಮೇಣ ಹೆಚ್ಚಾಗುತ್ತಿದ್ದಂತೆ ಭೋಪಾಲದಿಂದ 300 ಕಿ.ಮೀ. ದೂರದಲ್ಲಿರುವ ಧಾರ್ನ ಛೋಟಾಬರ್ದಾ ಗ್ರಾಮದಲ್ಲಿ ನರ್ಮದಾ ನದಿ ದಂಡೆಯಲ್ಲಿ ಪ್ರತಿಭಟನಕಾರು ಜಲ ಸತ್ಯಾಗ್ರಹ ಆರಂಭಿಸಿದ್ದಾರೆ.
ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನಿಸಾರ್ಪುರ ಹಾಗೂ ಚಾರಿತ್ರಿಕ ರಾಜ್ಘಾಟ್ ಮುಳುಗಡೆಯಾಗಿದೆ. ಜಿಲ್ಲಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ ಧಾರ್ ಹಾೂ ಬರ್ವಾನಿಯಲ್ಲಿ ಕಟ್ಟೆಚ್ಚರ ವಹಿಸಿವೆ.
ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಅಥವಾ ಪರಿಹಾರ ನೀಡಬೇಕು ಎಂದು ಆಗ್ರಹಿಸಿರುವ ಮೇಧಾ ಪಾಟ್ಕರ್, ಸುಪ್ರೀಂ ಕೋರ್ಟ್ನ ಆದೇಶವಿದ್ದರೂ ಇದನ್ನು ಅನುಸರಿಸಿಲ್ಲ ಎಂದು ದೂರಿದ್ದಾರೆ.
ಈ ಬೆಳವಣಿಗೆ ದುರಾದೃಷ್ಟಕರ ಎಂದಿರುವ ಅವರು, ಪುನರ್ವಸತಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಅಣೆಕಟ್ಟಿಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ.
ಪಾರಿಸರಿಕ ಹಾಗೂ ಪುನರ್ವಸತಿ ವಿಷಯಕ್ಕೆ ಸಂಬಂಧಿಸಿ ನರ್ಮದಾ ಬಚಾವೊ ಆಂದೋಲನ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ನ ಮೆಟ್ಟಿಲು ಏರಿತ್ತು. ಹಾಗೂ 1996ರಲ್ಲಿ ತಡೆಯಾಜ್ಞೆ ಪಡೆದುಕೊಂಡಿತ್ತು. 2000 ಅಕ್ಟೋಬರ್ನಲ್ಲಿ ಯೋಜನೆ ಪುನರಾರಂಭಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.







