ದಿಲ್ಲಿ : ರೊಹಿಂಗ್ಯಾ ನಿರಾಶ್ರಿತರಲ್ಲಿದೆ ಗೃಹ ಸಚಿವಾಲಯ ನೀಡಿರುವ ದೀರ್ಘಾವಧಿ ವೀಸಾ..!

ಹೊಸದಿಲ್ಲಿ, ಸೆ.17: ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ಗಡೀಪಾರು ಮಾಡಲು ಭಾರತ ಆದೇಶಿಸಿದೆ. ಆದರೆ ದಿಲ್ಲಿಯಲ್ಲಿರುವ ರೊಹಿಂಗ್ಯ ಮುಸ್ಲಿಮರ ಬಳಿ ಗೃಹ ಸಚಿವಾಲಯ ನೀಡಿರುವ ದೀರ್ಘಾವಧಿಯ ವೀಸಾ ಇರುವುದಾಗಿ ವರದಿಗಳು ತಿಳಿಸಿವೆ.
ಸುದ್ದಿ ಸಂಸ್ಥೆಯೊಂದರ ಪ್ರಕಾರ, ಆಗ್ನೇಯ ದಿಲ್ಲಿಯಲ್ಲಿರುವ ಶರಮ್ ವಿಹಾರ್ ಹಾಗೂ ಮದನ್‌ಪುರ್ ಖಾದರ್ ಎಂಬಲ್ಲಿ ಸುಮಾರು 1,000 ರೊಹಿಂಗ್ಯರು ನೆಲೆಸಿದ್ದು ಇವರಲ್ಲಿ ಕನಿಷ್ಟ 25 ಮಂದಿಯ ಬಳಿ ದೀರ್ಘಾವಧಿಯ ವೀಸಾ ಇದೆ.
ವೀಸಾ ಪಡೆಯಲು ತಾವು ಬಹಳಷ್ಟು ಶ್ರಮ ಪಟ್ಟಿರುವುದಾಗಿ ಶರಮ್‌ವಿಹಾರ್ ಶಿಬಿರದಲ್ಲಿರುವ ಮುಹಮ್ಮದ್ ಶಿರಾಝುಲ್ಲ ಎಂಬ ವ್ಯಕ್ತಿ ತಿಳಿಸಿದ್ದಾರೆ. “ನಮ್ಮ ಬಳಿ ಭಾರತ ಸರಕಾರ ನೀಡಿರುವ ದೀರ್ಘಾವಧಿ ವೀಸಾ ಇದೆ. ವಿಶ್ವಸಂಸ್ಥೆಯ ವಲಸಿಗರ ವಿಭಾಗದ ಹೈಕಮಿಷನರ್‌ರಿಂದ ಮೊದಲು ಸಮರ್ಥನೆ ಪತ್ರ ಪಡೆಯಬೇಕು. ಆ ಬಳಿಕ ನಾವು ಗೃಹ ಸಚಿವಾಲಯದಲ್ಲಿರುವ ವಿದೇಶೀಯರ ನೋಂದಣಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅವರು ಸೂಚಿಸಿದ ದಿನಾಂಕದಂದು ನಮ್ಮ ಮಕ್ಕಳ ಸಹಿತ ಅಲ್ಲಿಗೆ ತೆರಳಿ ಬೆರಳಚ್ಚಿನ ಗುರುತು ನೀಡಿದ ಬಳಿಕ ಮತ್ತೊಂದು ದಿನಾಂಕ ಸೂಚಿಸಲಾಗುತ್ತದೆ. ಅಂದು ಸಂದರ್ಶನ ನಡೆಸಿದ ಬಳಿಕ ನಮಗೆ ದೀರ್ಘಾವಧಿಯ ವೀಸಾ ನೀಡಲಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ 6 ತಿಂಗಳು ಬೇಕಾಗುತ್ತದೆ” ಎಂದವರು ತಿಳಿಸಿದ್ದಾರೆ. 2014ರಲ್ಲಿ ತನಗೆ ವೀಸಾ ದೊರಕಿದ್ದು ಪ್ರತೀ ವರ್ಷ ಇದನ್ನು ನವೀಕರಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ‘ನಿರಾಶ್ರಿತರ ಕಾನೂನಿಗೆ’ ಭಾರತ ಸಹಿಹಾಕಿಲ್ಲ. ಆದರೆ ಕಿರುಕುಳ ತಡೆಯಲಾರದೆ ದೇಶ ಬಿಟ್ಟು ಓಡಿಬಂದವರು ದೀರ್ಘಾವಧಿಯ ವೀಸಾ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಆದರೆ ರೊಹಿಂಗ್ಯ ಮುಸ್ಲಿಮರು ಈ ಗುಂಪಿಗೆ ಸೇರದ ಕಾರಣ ಅವರು ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ಧಾರೆಂದು ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸರಕಾರದ ಈ ವಾದ ಸರಿಯಲ್ಲ ಎಂದು ಕೆಲವು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ನಿರಾಶ್ರಿತರೂ ಪಾಸ್‌ಪೋರ್ಟ್ ಅಥವಾ ವೀಸಾ ಇಲ್ಲದೆ ಬರುವ ಕಾರಣ ತಾಂತ್ರಿಕವಾಗಿ ಅವರೆಲ್ಲಾ ‘ಅಕ್ರಮ ’ ವಲಸಿಗರಾಗುತ್ತಾರೆ. ಒಮ್ಮೆ ಗಡಿದಾಟಿ ಬಂದ ನಿರಾಶ್ರಿತರನ್ನು, ಜೀವಕ್ಕೆ ಅಪಾಯ ಇರುವ ಸ್ಥಳಕ್ಕೆ ಗಡೀಪಾರು ಮಾಡಬಾರದು. ಇದು ಅವರಿಗೆ ಮರಣದಂಡನೆ ವಿಧಿಸಿದ ಕ್ರಮವಾಗುತ್ತದೆ ಎಂದು ಅಂತಾರಾಷ್ಟ್ರೀಯ ಕಾನೂನು ಹಾಗೂ ಭಾರತದ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವಿಸ್ ಹೇಳಿದ್ದಾರೆ.
ಯಾವುದೇ ರೊಹಿಂಗ್ಯರಿಗೆ ದೀರ್ಘಾವಧಿ ವೀಸಾ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತದ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಜೈಪುರದಲ್ಲಿ ನೆಲೆಸಿರುವ ರೊಹಿಂಗ್ಯರು, ಸ್ಥಳೀಯರ ಪ್ರೋತ್ಸಾಹದಿಂದ ದೀರ್ಘಾವಧಿ ವೀಸಾ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ದೀರ್ಘಾವಧಿ ವೀಸಾ ಪಡೆಯುವಂತೆ ಅವರನ್ನು ಪ್ರೇರಿಸಲಾಗಿದೆ. ಒಮ್ಮೆ ನೋಂದಣಿಗೊಂಡರೆ ಅವರ ಬಗ್ಗೆ ವಿವರವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು ಹಾಗೂ ಅವರು ದೇಶದಲ್ಲಿ ನಡೆಸುವ ಚಲನವಲನದ ಬಗ್ಗೆ ಮಾಹಿತಿ ಪಡೆಯಲು ಸುಲಭವಾಗುತ್ತದೆ ಎಂದು ಜೈಪುರದ ಎಎಸ್‌ಪಿ ರಾಮ್‌ಜೀವನ್ ಗುಪ್ತ ಹೇಳಿದ್ದಾರೆ.







