ಟ್ರ್ಯಾಕ್ಟರ್ ಟ್ರೈಲರ್ ಪ್ರತ್ಯೇಕ ಅನುಮೋದನೆ ಪತ್ರ ಅವಶ್ಯಕತೆಯಿಲ್ಲ: ಹೈಕೋರ್ಟ್

ಬೆಂಗಳೂರು, ಸೆ.17: ಟ್ರ್ಯಾಕ್ಟರ್ ಟ್ರೈಲರ್ ಚಾಲನೆಗೆ ಪ್ರತ್ಯೇಕ ಪರವಾನಗಿ ಹೊಂದಿರಬೇಕಿಲ್ಲ. ಲಘು ಮೋಟಾರು ವಾಹನ ವರ್ಗದ ವಾಹನಗಳ ಚಾಲನಾ ಪರವಾನಗಿ ಹೊಂದಿದ್ದರೆ ಸಾಕು. ಟ್ರೈಲರ್‌ನೊಂದಿಗೆ ಟ್ರಾಕ್ಟರ್ ಚಾಲನೆ ಮಾಡಬಹುದು ಎಂಬ ಆದೇಶ ಹೊರಡಿಸುವ ಮೂಲಕ ಟ್ರ್ಯಾಕ್ಟರ್ ಚಾಲನೆ ಪರವಾನಗಿ ಹೊಂದಿದ್ದರೂ ಟ್ರೈಲರ್ ಚಾಲನೆಗೆ ಅನುಮೋದನೆ ಪತ್ರ ಹೊಂದಿಲ್ಲ ಎಂಬ ಕಾರಣಕ್ಕೆ ಅಪಘಾತ ಪ್ರಕರಣವೊಂದರ ಮಾಲಕನಿಗೆ ಹೈಕೋರ್ಟ್ ನಿರಾಳತೆ ಮೂಡಿಸಿದೆ.
ಅಲ್ಲದೆ, ಸಂತ್ರಸ್ತನಿಗೆ 12 ಲಕ್ಷ ರೂ.ಗಿಂತ ಹೆಚ್ಚಿನ ಪರಿಹಾರ ಪಾವತಿಸುವುದಕ್ಕೆ ಟ್ರಾಕ್ಟರ್‌ನ ವಿಮೆ ಹೊಂದಿದ್ದ ವಿಮಾ ಕಂಪೆನಿಯನ್ನು ಹೊಣೆಗಾರಿಕೆ ಮಾಡಿದೆ.
ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 10, ವಾಹನ ಪರವಾನಗಿಗಳ ವರ್ಗೀಕರಣವನ್ನು ತಿಳಿಸುತ್ತದೆ. ವಾಹನಗಳ ಗಾತ್ರ ಆಧರಿಸಿ ಈ ವರ್ಗೀಕರಣ ಮಾಡಲಾಗಿದೆ. ಒಂದು ವರ್ಗದ ಪರವಾನಗಿಯನ್ನು ಒಬ್ಬ ವ್ಯಕ್ತಿಗೆ ನೀಡಿದರೆ, ಅದೇ ವರ್ಗದ ವ್ಯಾಪ್ತಿಗೆ ಬರುವ ಎಲ್ಲ ವಾಹನಗಳ ಚಾಲನೆಗೂ ಪರವಾನಗಿ ಪಡೆದುಕೊಂಡಂತೆ. ಅದರ ಬದಲು ಒಂದೇ ವರ್ಗದ ಒಂದೊಂದು ಮಾದರಿ ವಾಹನಗಳ ಚಾಲನೆಗೂ ಬೇರೆ ಬೇರೆ ಪರವಾನಗಿ ಹೊಂದಬೇಕಿಲ್ಲ. ಲಘು ಮೋಟಾರು ವಾಹನ ವರ್ಗದಡಿಗೆ ಟ್ರ್ಯಾಕ್ಟರ್ ಬರಲಿದೆ. ಟ್ರಾಕ್ಟರ್ ಚಾಲನಾ ಪರವಾನಗಿ ಪಡೆದರೆ, ಟ್ರೈಲರ್‌ನೊಂದಿಗೆ ಟ್ರ್ಯಾಕ್ಟರ್ ಓಡಿಸಬಹುದು. ಆದರೆ, ಟ್ರೈಲರ್ ಚಾಲನೆಗೆ ಪ್ರತ್ಯೇಕ ಅನುಮೋದನೆ ಪತ್ರ ಪಡೆಯಬೇಕಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆನೇಕಲ್‌ನಲ್ಲಿ ನಡೆದಿದ್ದ ಅಪಘಾತ: 2011ರ ಎ.25ರಂದು ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಶಿವನಹಳ್ಳಿಯಲ್ಲಿ ಕೂಲಿಕಾರ ಮಲ್ಲೇಶ್‌ಗೆ ದೊಡ್ಡ ವೆಂಕಟರಮಣಪ್ಪ ಒಡೆತನದ ಟ್ರೈಲರ್ ಜೊತೆಗಿನ ಟ್ರಾಕ್ಟರ್ ಢಿಕ್ಕಿ ಹೊಡೆದಿತ್ತು. ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದರೂ ಉದ್ಯೋಗ ಮಾಡಲಾಗದಂತಹ ಸ್ಥಿತಿಗೆ ತಲುಪಿದ್ದರು. ಪ್ರಕರಣ ಸಂಬಂಧ ಟ್ರ್ಯಾಕ್ಟರ್ ಮತ್ತದರ ಚಾಲಕನ ವಿರುದ್ಧ ಅತಿವೇಗ ಹಾಗೂ ನಿರ್ಲಕ್ಷ ಚಾಲನೆಯ ದೂರು ದಾಖಲಿಸಲಾಗಿತ್ತು. ಇತ್ತ ಮಲ್ಲೇಶ್ ಪರಿಹಾರಕ್ಕಾಗಿ ವಾಹನ ಅಪಘಾತ ವಿಮಾ ನ್ಯಾಯಮಂಡಳಿ(ಎಂಎಸಿಟಿ) ಮೆಟ್ಟಿಲೇರಿದ್ದರು.
ಆ ಅರ್ಜಿ ವಿಚಾರಣೆ ವೇಳೆ ವಿಚಾರಣೆ ನಡೆಸಿದ್ದ ಎಂಎಸಿಟಿ, ಪ್ರಕರಣದಲ್ಲಿ ಅಪಘಾತದ ವೇಳೆ ಚಾಲಕನು ಟ್ರ್ಯಾಕ್ಟರ್ ಚಾಲನಾ ಪರವಾನಗಿ ಹೊಂದಿದ್ದ. ಆದರೆ, ಟ್ರೈಲರ್ ಚಾಲನೆಗೆ ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ, ಪರವಾನಗಿ ಹೊಂದಿರದ ಚಾಲಕನನ್ನು ನೇಮಿಸಿಕೊಂಡಿದ್ದ ಟ್ರ್ಯಾಕ್ಟರ್ ಮಾಲಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿತ್ತು.
ವಿಮಾ ಕಂಪೆನಿಗೆ ಪರಿಹಾರ ಪಾವತಿ ಹೊಣೆ: ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಪೀಠ, ಲಘು ಮೋಟಾರು ವಾಹನ ವರ್ಗದ ಚಾಲನಾ ಪರವಾನಗಿ ಹೊಂದಿದ್ದರೆ ಸಾಕು. ಟ್ರೈಲರ್ ಜೊತೆಗೆ ಟ್ರಾಕ್ಟರ್ ಓಡಿಸಲು ಅನುಮತಿ ಪಡೆದುಕೊಂಡಂತೆ. ಟ್ರ್ಯಾಕ್ಟರ್ ಜೊತೆಗೆ ಟ್ರೈಲರ್ ಚಾಲನೆ ಮಾಡಲು ಅನುಮೋದನೆ ಪತ್ರ ಪಡೆಯುವ ಅಗತ್ಯವಿದೆ ಎಂದು ಹೇಳಿರುವ ನ್ಯಾಯಾಧಿಕರಣ ಆದೇಶ ಒಪ್ಪುವಂತಹುದಲ್ಲ. ನ್ಯಾಯಾಧಿಕರಣದ ಆದೇಶ ರದ್ದತಿಗೆ ಅರ್ಹವಾಗಿದೆ. ಹೀಗಾಗಿ, ಪ್ರಕರಣದಲ್ಲಿ ವಿಮಾ ಕಂಪೆನಿಯೇ ಮಲ್ಲೇಶ್‌ಗೆ ಶೇ.8ರಷ್ಟು ಬಡ್ಡಿದರದಲ್ಲಿ 12.77 ಲಕ್ಷ ರೂ.ಪರಿಹಾರ ಪಾವತಿಸಬೇಕು. ಒಂದೊಮ್ಮೆ ದೊಡ್ಡ ವೆಂಕಟರಮಣಪ್ಪ ಪ್ರಕರಣ ಸಂಬಂಧ ಕೋರ್ಟ್‌ಗೆ ಹಣ ಪಾವತಿಸಿದ್ದರೆ ಅದನ್ನು ಆತನಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿ ಮೇಲ್ಮನವಿ ಪುರಸ್ಕರಿಸಿತು.







