ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ನ ಎತ್ತರ ಮತ್ತೆ ಅಳೆಯಲು ನೇಪಾಳ ಸಜ್ಜು
ಎವರೆಸ್ಟ್ ಗೇ ಏಣಿ !

ಕಾಠ್ಮಂಡು,ಸೆ.17: 2015ರಲ್ಲಿ ನೇಪಾಳವನ್ನೇ ನಡುಗಿಸಿದ ಭೀಕರ ಭೂಕಂಪದ ದಿಂದಾಗಿ ಎವರೆಸ್ಟ್ ಶಿಖರದ ಎತ್ತರದಲ್ಲಿ ಬದಲಾವಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿಶ್ವದ ಈ ಅತ್ಯುನ್ನತ ಶಿಖರವನ್ನು ಮರುಅಳೆಯಲು ನೇಪಾಳ ಸರಕಾರವು ತಿಳಿಸಿದೆ.
ನೇಪಾಳ-ಚೀನಾ ಗಡಿಯ ಹಿಮಾಲಯ ಪರ್ವತಶ್ರೇಣಿಯಲ್ಲಿರುವ ಎವರೆಸ್ಟ್ ಶಿಖರವನ್ನು 1954ರಲ್ಲಿ ನಡೆಸಲಾದ ಭಾರತೀಯ ಸರ್ವೆಯಡಿ, ಮೊದಲ ಬಾರಿಗೆ ಅಳೆಯಲಾಗಿದ್ದು ಆಗ ಅದರ ಎತ್ತರ 8,848 ಮೀಟರ್ (29,029)ಗಳಾಗಿದ್ದವು.
ಆನಂತರ ಇತರ ಹಲವಾರು ತಂಡಗಳು ಎವರೆಸ್ಟ್‌ನ ಎತ್ತರವನ್ನು ಅಳೆದಿವೆಯಾದರೂ, 1954ರ ಸರ್ವೆಯಲ್ಲಿ ದಾಖಲಿಸಲಾದ ಎತ್ತರ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿದೆ.
ಎವರೆಸ್ಟ್ ಶಿಖರವು ತನ್ನ ವ್ಯಾಪ್ತಿಯಲ್ಲಿದ್ದರೂ ನೇಪಾಳವು ಅದನ್ನು ಈ ಮೊದಲು ಅಳೆದಿರಲಿಲ್ಲ. ಇದೀಗ ನೇಪಾಳವು ಎವರೆಸ್ಟ್ ಪರ್ವತವನ್ನು ಅಳೆಯಲು ಶಕ್ತವಾಗಿದೆಯೆಂಬುದನ್ನು ಸಾಬೀತುಪಡಿಸಲು ನಾವು ಬಯಸಿದ್ದೇವೆ ಎಂದು ಸರಕಾರಿ ಸರ್ವೆ ಇಲಾಖೆಯ ವರಿಷ್ಠ ಗಣೇಶ್ ಪ್ರಸಾದ್ ಭಟ್ಟ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಎವರೆಸ್ಟ್ ಪರ್ವತಾರೋಹಣದ ಋತುವು ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದ್ದು, ಆಗ ಶೆರ್ಪಾಗಳ ತಂಡವೊಂದು ವಿಶ್ವದ ಈ ಅತ್ಯುನ್ನತ ಶಿಖರವನ್ನು ಅಳೆಯಲಿದೆಯೆಂದು ಅವರು ಹೇಳಿದ್ದಾರೆ.
2015ರ ಎಪ್ರಿಲ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ 7.8 ರಿಕ್ಟರ್ ಮಾಪಕ ತೀವ್ರತೆಯ ಭೂಕಂಪದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು. ಭೂಕಂಪದಿಂದಾಗಿ ಎವರೆಸ್ಟ್ ಶಿಖರದಲ್ಲಿ ಭಾರೀ ಹಿಮಪಾತವುಂಟಾಗಿ ಬೇಸ್‌ಕ್ಯಾಂಪ್‌ನಲ್ಲಿದ್ದ 18 ಮಂದಿ ಪರ್ವತಾರೋಹಿಗಳು ಸಾವನ್ನಪ್ಪಿದ್ದರು. ಭೂಕಂಪದ ಬಳಿಕ ಎವರೆಸ್ಟ್‌ನ ಎತ್ತರದಲ್ಲಿ ಮಾರ್ಪಾಡಾಗಿರುವುದಾಗಿ ಹಲವಾರು ತಜ್ಞರು ಸಂದೇಹ ವ್ಯಕ್ತಪಡಿಸಿದ್ದರು.







