ಮುಂದಿನ ಆರು ತಿಂಗಳಲ್ಲಿ ಎಲ್ಲಾ ಕೆರೆ ಕಟ್ಟೆಗಳ ಒತ್ತುವರಿ ತೆರವು: ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್

ತುಮಕೂರು, ಸೆ.17: ಮುಂದಿನ ಆರು ತಿಂಗಳ ಒಳಗೆ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಕೆರೆ, ಕಟ್ಟೆಗಳ ರಾಜಗಾಲುವೆಗಳ ಒತ್ತುವರಿ ತೆರವು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ತಿಳಿಸಿದ್ದಾರೆ.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಯಜ್ಞ ಮಹೋತ್ಸವ ಸಮಿತಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಮತ್ತು ಕಾಳಿಕಾಂಬ ದೇವಿಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ತೆರೆವು ಕಾರ್ಯ ಆರಂಭವಾಗಿದೆ. ತುಮಕೂರು ಅಮಾನೀಕೆರೆಯ ರಾಜಗಾಲುಮೆ ಒತ್ತುವರಿ ತೆರೆವು ಪೂರ್ಣಗೊಂಡಿದೆ. ಉಳಿದವುಗಳ ಸರ್ವೇ ಕಾರ್ಯ ನಡೆಯುತ್ತಿದೆ ಎಂದರು.
ವಿಶ್ವ ಕರ್ಮ ಸಮುದಾಯ ಕುಲಕಸುಬಿನಲ್ಲಿ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳುವ ಮೂಲಕ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿ ಎದುರಿಸಲು ಸಿದ್ಧರಾಗಬೇಕು. ಕೇಂದ್ರದ ಪಿಎಂಇಜಿಪಿ ಮತ್ತು ರಾಜ್ಯದ ಸಿಎಂಇಜಿಪಿ ಯೋಜನೆಗಳಲ್ಲಿ ಕುಲ ಕಸುಬುಗಳಿಗೆ ಆಧುನಿಕತೆಯ ಸ್ಪರ್ಷ ನೀಡಲು ಅವಕಾಶವಿರುವ ತಂತ್ರಜ್ಞಾನ ಬಳಸಿಕೊಳ್ಳಲು ಅವಕಾಶವಿದೆ ಎಂದರು.
ಇದುವರೆಗೂ ವಿಶ್ವಕರ್ಮ ಜನಾಂಗ ಸರಕಾರದ ಯಾವುದೇ ಸವಲತ್ತುಗಳನ್ನು ನಂಬದೆ, ತನ್ನ ಕುಶಲತೆಯನ್ನೇ ನಂಬಿ ಬದುಕು ಕಟ್ಟಿಕೊಂಡವರು. ಪ್ರಸ್ತುತ ಸರಕಾರವೂ ಈ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ಕೋಟ್ಯಾಂತರ ರೂ. ಅನುದಾನ ಒದಗಿಸಿದೆ. ಇದರ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನೀವೆಲ್ಲರೂ ಮುಂದಾಗಬೇಕು ಎಂದ ಅವರು, ಸಮುದಾಯದ ಮುಖಂಡರು ಯುವಕರ ಹಾಸ್ಟೆಲ್ ನಿರ್ಮಾಣಕ್ಕೆ ಮತ್ತು ವಿಶ್ವ ಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೇಳಿದ್ದು, ಶೀಘ್ರದಲ್ಲಿಯೇ ನಿವೇಶನ ಗುರುತಿಸಿ ನೀಡಲಾಗುವುದು. ಅಲ್ಲದೆ ಹುಡುಗರ ಹಾಸ್ಟಲ್ ಜೊತೆ, ಯುವತಿಯರ ಹಾಸ್ಟೆಲ್ ನಿರ್ಮಾಣಕ್ಕೂ ಅನುದಾನ ನೀಡಲು, ತದನಂತರ ಆಹಾರ ಧಾನ್ಯವನ್ನು ರಿಯಾಯಿತಿ ದರದಲ್ಲಿ ವಿತರಿಸಲು ಸಹ ಜಿಲ್ಲಾಡಳಿತ ಸಿದ್ಧವಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ವಿಶ್ವಕರ್ಮ ಜನಾಂಗದ ಮುಖಂಡ ನಾಗರಾಜಾಚಾರ್ ಮಾತನಾಡಿ, ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಮತ್ತು ಸಮುದಾಯಭವನ ನಿಮಾರ್ಣಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಸಮುದಾಯದ ಆರ್ ಟಿಐ ಕಾರ್ಯಕರ್ತ ಎಲ್.ನಾರಾಯಣಾಚಾರ್, ಮಾಜಿ ಸೈನಿಕ ಚಂದ್ರಶೇಖರಾಚಾರ್, ಸಂಘದ ಖಜಾಂಚಿ ಸಿದ್ದಾಚಾರ್, ಪತ್ರಿಕಾ ಛಾಯಾಗ್ರಾಹಕ ಟಿ.ಎಚ್.ಸುರೇಶ್, ಸಮುದಾಯ ಮುಖಂಡ ಟಿ.ಯೋಗೀಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನಾ ನಗರದ ವಿವಿದ ರಾಜಬೀದಿಗಳಲ್ಲಿ ವಿಶ್ವಕರ್ಮ ಮತ್ತು ಶ್ರೀಕಾಳಿಕಾಂಬ ದೇವಿಯ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು. ಅಲ್ಲದೆ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡು, ನೃತ್ಯ,ವೇಷ ಭೂಷಣ ಸ್ಪರ್ಧೆಗಳು ನಡೆದು, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.







