ವಿಶ್ವ ಕರ್ಮ ಜನಾಂಗದ ಅಭಿವೃದ್ಧಿಗೆ ಸರಕಾರ ಬದ್ಧ: ಸಚಿವ ಟಿ.ಬಿ.ಜಯಚಂದ್ರ
ತುಮಕೂರು, ಸೆ.17: ಜಗತ್ತಿನ ಆಗು-ಹೋಗುಗಳ ಬಗ್ಗೆ ಅರಿಯುವಂತಹ “ಕಾಲಜ್ಞಾನ” ಕೃತಿಯು ವಿಶ್ವಕರ್ಮ ಜನಾಂಗದ ಕೊಡುಗೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಬಣ್ಣಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಸಹಯೋಗದಲ್ಲಿ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿಂದು ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಭವಿಷ್ಯದಲ್ಲಾಗುವ ಮಳೆ-ಬೆಳೆ ಪರಿಸ್ಥಿತಿ, ಸೃಷ್ಟಿಯ ಸ್ಥಿತಿ-ಗತಿಗಳ ಬಗ್ಗೆ ಕಾಲಜ್ಞಾನ ಕೃತಿಯನ್ನು ಓದುವ ಮೂಲಕ ತಿಳಿಯಬಹುದು. ಈ ಕೃತಿಯಲ್ಲಿರುವ 320 ಶಬ್ದಗಳ ಅಂಶಗಳು ವೈಜ್ಞಾನಿಕವಾಗಿಯೂ ರುಜುವಾತಾಗಿದ್ದು, ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಜಗತ್ತಿನ ಏಳಿಗೆಗಾಗಿ ಕಾಲಜ್ಞಾನ ಕೃತಿಯನ್ನು ರಚಿಸಿ ಕೊಡುಗೆಯಾಗಿ ನೀಡಿರುವ ವಿಶ್ವಕರ್ಮ ಜನಾಂಗದ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿಗಳು ಬ್ರಹ್ಮಜ್ಞಾನಿಗಳಾಗಿದ್ದರು ಎಂದು ತಿಳಿಸಿದರು.
ಭಾರತದ ಇತಿಹಾಸ, ಚರಿತ್ರೆಯನ್ನು ಸೃಷ್ಟಿಸಿದ ಈ ಜನಾಂಗ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ಬೃಹತ್ ಗುಡಿ-ಗೋಪುಗಳಲ್ಲಿರುವ ಕೆತ್ತನೆಗಳಿಂದ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಅರಿಯಲು ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯಂತ್ರಗಳ ಪ್ರಯೋಗದಿಂದ ಪ್ರಾಚೀನ ಇತಿಹಾಸವಿರುವ ವಿಶ್ವಕರ್ಮರ ಕಸುಬು ಕ್ಷೀಣಿಸುತ್ತಿದ್ದರೂ ತಮ್ಮ ಶಿಲ್ಪ ಕೌಶಲ್ಯತೆಯಿಂದ ಕೆತ್ತನೆ, ಕುಸುರಿ ಕೆಲಸಗಳನ್ನು ಇನ್ನೂ ಜೀವಂತವಾಗಿಟ್ಟುಕೊಂಡು ಸ್ವಾಭಿಮಾನಿಗಳಾಗಿ ಬದುಕುತ್ತಿರುವುದು ಹೆಮ್ಮೆಯ ವಿಷಯ. ಜನಾಂಗದ ಅಭಿವೃದ್ಧಿಗೆ ಸರಕಾರ ಸದಾ ಬದ್ಧವಾಗಿರುತ್ತದೆ ಎಂದರು.
ಕಾರ್ಯಕಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ವಿಶ್ವ ಕರ್ಮ ಸಮುದಾಯದವರಿಂದ ನಗರದಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯಾರ್ಥಿನಿಲಯ, ಸಂಸ್ಕೃತ ಪಾಠಶಾಲೆಗೆ ಸಂಸದರ ನಿಧಿಯಿಂದ 5 ಲಕ್ಷ ರೂ.ಗಳನ್ನು ಒದಗಿಸಲಾಗುವುದೆಂದು ವಾಗ್ದಾನ ಮಾಡಿದರು. ವಿಶ್ವ ಕರ್ಮ ಜನಾಂಗದವರು ದುಡಿದು ತಿನ್ನುವ ಜನ. ನಂಬಿಕೆ ಅರ್ಹರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಎಸ್.ರಫೀಕ್ ಅಹ್ಮದ್ ಮಾತನಾಡಿ, ಸಮುದಾಯದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ನೀಡುವ ಭರವಸೆಯನ್ನು ಈ ಹಿಂದೆ ನೀಡಿದಂತೆ ಈಗಾಗಲೇ 2.5 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿದ ಹಣವನ್ನು ಶೀಘ್ರವೇ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಉಪನ್ಯಾಸ ನೀಡಿದ ಮನೋಶಾಸ್ತ್ರಜ್ಞೆ ಹಾಗೂ ಶಿಕ್ಷಣ ತಜ್ಞೆ ಎಸ್.ಆರ್. ಜಲಜಕುಮಾರಿ ಮಾತನಾಡುತ್ತಾ ವಿಶ್ವಕರ್ಮ ಜನಾಂಗದವರು ಕೆತ್ತನೆ ಕಲೆಯಲ್ಲಷ್ಟೇ ಪ್ರವೀಣರಲ್ಲ. ಸಂಗೀತ, ನೃತ್ಯ, ಸಾಹಿತ್ಯ, ಜ್ಯೋತಿಷ್ಯ, ವೈದ್ಯ ಮತ್ತಿತರ ಕಲಾ ಪ್ರಕಾರಗಳಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ದೇಶದ ಸಾಂಸ್ಕೃತಿಕ ವೈಭವವನ್ನು ಇಡೀ ಜಗತ್ತಿಗೇ ಹರಡಿದ ಜನ ಇಂದು ಹಿಂದುಳಿದಿದ್ದಾರೆ. ತಮ್ಮ ಸಂಘಟನೆ ಮೂಲಕ ಜನಾಂಗದ ಕಲ್ಯಾಣಕ್ಕಾಗಿ ಸ್ವಶಕ್ತಿಯಿಂದ ಹೋರಾಡಬೇಕು ಎಮದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಗೌರವಾಧ್ಯಕ್ಷ ಟಿ.ಎಚ್. ಆನಂದರಾಮು ವಿಶ್ವಕರ್ಮ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಉಪವಿಭಾಗಾಧಿಕಾರಿ ತನಸ್ಸುಮ್ ಜಹೇರಾ, ಸಮಾಜದ ಮುಖಂಡರಾದ ಪಿ.ಟಿ.ನರಸಿಂಹಮೂರ್ತಿ, ಕೆ.ಬಿ. ಗಜೇಂದ್ರಾಚಾರ್, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಸದಸ್ಯ ಶೇಖರ್, ಮತ್ತಿತರರು ಉಪಸ್ಥಿತರಿದ್ದರು.







